ವಿಜಯವಾಣಿ ಸುದ್ದಿಜಾಲ ಉಡುಪಿ
ಶಿಕ್ಷಣ ಕಾಶಿ ಎಂದು ಪ್ರಸಿದ್ಧವಾಗಿರುವ, ಶೈಕ್ಷಣಿಕವಾಗಿ ನಿರಂತರ ಉತ್ತಮ ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಡುಪಿಗೆ ಐಟಿ-ಬಿಟಿ ಪಾರ್ಕ್ ಮಂಜೂರು ಮಾಡಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿಯಲ್ಲಿ ಐಟಿ-ಬಿಟಿ ಪಾರ್ಕ್ ಆಗಬೇಕು ಎನ್ನುವುದು ಈ ಭಾಗದ ಯುವ ಜನತೆಯ ಬಹು ದಶಕದ ಬೇಡಿಕೆಯಾಗಿದೆ. ಉಡುಪಿ ಜಿಲ್ಲೆಯು ಭೂ, ಜಲ, ರೈಲ್ವೆ ಮತ್ತು ಸನಿಹದಲ್ಲೇ ವಾಯು ಸಾರಿಗೆಯ ಸಂಪರ್ಕವನ್ನೂ ಹೊಂದಿದೆ. ಧಾರ್ಮಿಕ, ಪ್ರವಾಸೋದ್ಯಮ, ಮೀನುಗಾರಿಕೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸಹಕಾರ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಎಲ್ಲ ಮೂಲಸೌಲಭ್ಯವನ್ನೂ ಹೊಂದಿದೆ ಎಂದು ಜಿಲ್ಲೆಯ ವಿಶೇಷತೆಯ ಕುರಿತು ಸಚಿವ ಖರ್ಗೆಗೆ ಯಶ್ಪಾಲ್ ಮನವರಿಕೆ ಮಾಡಿದರು.