ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್ ಝಾರಾ ಸಹಿತ ಹಲವಾರು ಕಟ್ಟಡಗಳು ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ಅಕ್ರಮವಾಗಿ ನಿರ್ಮಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮವಹಿಸಿ, ವಾರದೊಳಗೆ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ರಸ್ತೆಯ ಸಮೀಪ ಇದ್ದ ಝಾರಾ ಹೋಟೆಲ್ಅನ್ನು 2 ವರ್ಷದ ಹಿಂದೆ ನಗರಸಭೆ ತೆರವುಗೊಳಿಸಿತ್ತು. ಮತ್ತದೇ ಜಾಗದಲ್ಲಿ ಹೋಟೆಲ್ ಅಕ್ರಮವಾಗಿ ತಲೆ ಎತ್ತಿದೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಸಹ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಟ್ಟಡಕ್ಕೆ ಕಾನೂನು ಮೀರಿ ನೀಡಿರುವ ಅನುಮತಿ ರದ್ದುಮಾಡಿ ತೆರವುಗೊಳಿಸುವಂತೆ ಈಗಾಗಲೇ ಅನೇಕ ದೂರುಗಳು ನಗರಸಭೆಗೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷದ ಏಪ್ರಿಲ್ ತಿಂಗಳಿಂದ ನಗರಸಭೆಯಲ್ಲಿ ಕೌನ್ಸಿಲ್ ಅಸ್ತಿತ್ವದಲ್ಲಿ ಇಲ್ಲದ್ದರಿಂದ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಈ ಅವಧಿಯಲ್ಲಿ ನಗರಸಭೆಯ ಅಧಿಕಾರಿಗಳು ರಾಜಾರೋಷವಾಗಿ ಅಕ್ರಮ ಕಟ್ಟಡಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರದೊಳಗೆ ಅಕ್ರಮ ಹೋಟೆಲ್ ತೆರವಿಗೆ ಮುಂದಾಗದಿದ್ದಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಅಂತಹ ಸನ್ನಿವೇಶ ಸೃಷ್ಟಿಯಾಗಿ ಮುಂದೆ ನಡೆಯುವ ಎಲ್ಲ ಬೆಳವಣಿಗೆಗಳಿಗೆ ಉಡುಪಿ ನಗರಸಭೆಯ ಪೌರಾಯುಕ್ತರೇ ಹೊಣೆಯಾಗಲಿದ್ದಾರೆ. ಯಶ್ಪಾಲ್ ಸುವರ್ಣ. ಶಾಸಕ, ಉಡುಪಿ