ಜಿಲ್ಲೆ

ಕ್ರೀಡೆಯಿಂದ ಮಾನಸಿಕ ಆರೋಗ್ಯ ವೃದ್ಧಿ

ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಿಡುವಿನ ಸಮಯದಲ್ಲಿ ಮೊಬೈಲ್​ ಹಿಡಿದು ಸಮಯ ವ್ಯರ್ಥ ಮಾಡುವ ಬದಲು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯವಂತಾರಾಗಬಹುದು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿಯಾಗುತ್ತದೆ. ಇತ್ತೀಚೆಗೆ ದೇಶದ ಕ್ರೀಡಾ ಕ್ಷೇತ್ರವೂ ಅಭಿವೃದ್ಧಿ ಹೊಂದುತ್ತಿದ್ದು, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿಲಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​, ಲಯನ್ಸ್​ ಕ್ಲಬ್​ ಮಿಡ್​ಟೌನ್​ ಉಡುಪಿ, ಉಡುಪಿ ಜಿಲ್ಲಾ ಲಾನ್​ ಟೆನ್ನಿಸ್​ ಅಸೋಸಿಯೇಷನ್​ ಮತ್ತು ಕಾಲೇಜು ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಯುಜಿಎವಿ ಹಾಲ್​ನಲ್ಲಿ ಆಗಸ್ಟ್​ 29ರಂದು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಬಹಳ ಮುಖ್ಯ ಎಂದರು. ಉಡುಪಿ ಜಿಲ್ಲಾ ಲಾನ್​ ಟೆನ್ನಿಸ್​ ಅಸೋಸಿಯೇಷನ್​ನ ಅಧ್ಯಕ್ಷ ಸಿಎ ದೇವ್​ಆನಂದ್​ ಹಾಗೂ ಲಯನ್ಸ್​ ಕ್ಲಬ್​ ಮಿಡ್​ಟೌನ್​ನ ಅಧ್ಯಕ್ಷ ಲ.ಪುರುಷೋತ್ತಮ ನಾಯಕ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿರುವ ಕಾಲೇಜಿನ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಸೋಜನ್​ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕ್ರೀಡಾ ಪ್ರತಿನಿಧಿ ಉಷಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ ವಂದಿಸಿದರು.