ಜಿಲ್ಲೆ

ವಿಶ್ವಕ್ಕೆ ಭಕ್ತಿಯ ಮಹಿಮೆ ತೋರ್ಪಡಿಸಿದ ಸಂತ

ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

ಜಿಲ್ಲಾ ಮಟ್ಟದ ಕನಕದಾಸ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಕ್ತಿ ಸಂಕೀರ್ತನೆಗಳ ಮೂಲಕ ಹಾಗೂ ಉಡುಪಿ ಶ್ರೀಕೃಷ್ಣನೊಂದಿಗೆ ಭಕ್ತಿಭಾವದ ನಂಟು ಹೊಂದಿದ್ದ ಕನಕದಾಸರ ಬದುಕು ಆದರ್ಶಮಯ. ಕೃಷ್ಣನ ಪರಮಭಕ್ತರಾಗಿದ್ದ ಅವರು ಸರಳ ಭಕ್ತಿಗೆ ಭಗವಂತ ಒಲಿಯುತ್ತಾನೆ ಎನ್ನುವುದನ್ನು ಕಲಿಯುಗದಲ್ಲೂ ವಿಶ್ವಕೆ ತೋರ್ಪಡಿಸಿದ್ದಾರೆ. ಕನಕರ ಆ ಭಕ್ತಿದಾಯಕ ಜೀವನ ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್​ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ (ರಿ.) ಹಾಗೂ ಹಾಲುಮತ ಮಹಾಸಭಾ (ರಿ.) ಉಡುಪಿ ಜಿಲ್ಲೆ ಆಶ್ರಯದಲ್ಲಿ ಶನಿವಾರ (ನ.8) ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕನ ಕಿಂಡಿ ಕೈಗನ್ನಡಿ

ಕೃಷ್ಣನ ಕುರಿತಾಗಿಯೇ ಸಾಹಿತ್ಯ ರಚಿಸಿ ಹಾಡುತ್ತಿದ್ದ ಕನಕರ ಭಕ್ತಿಗೆ 5 ಶತಮಾನದ ಹಿಂದೆ ಕೃಷ್ಣ ಪ್ರಸನ್ನನಾಗಿದ್ದ. ಅದಕ್ಕೆ ಉಡುಪಿಯಲ್ಲಿ ಈಗಲೂ ಇರುವ ಐತಿಹಾಸಿಕ ಕನಕನ ಕಿಂಡಿ ಕೈಗನ್ನಡಿಯಾಗಿದೆ. ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರು ಮೊದಲು ಕನಕನ ಕಿಂಡಿಯಿಂದಲೇ ದೇವರ ದರ್ಶನ ಪಡೆಯುವುದು ಕನಕದಾಸರ ಭಕ್ತಿಯ ಶ್ರೇಷ್ಠತೆಗೆ ನಿದರ್ಶನವಾಗಿದೆ. ಪರ್ಯಾಯ ಪೀಠವೇರುವ ಮುನ್ನ ಅಷ್ಠ ಮಠದ ಎಲ್ಲ ಶ್ರೀಗಳೂ ಸಹ ಮೊದಲು ಕನಕನ ಕಿಂಡಿಯ ಮೂಲಕವೇ ಕೃಷ್ಣನ ದರ್ಶನ ಪಡೆಯುವ ಸಂಪ್ರದಾಯವಿದೆ. ಇದು ಕನಕನದಾಸರ ಭಕ್ತಿ ಪರಂಪರೆಗೆ ಸಂದ ಗೌರವ ಎಂದರು.

ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​, ಕನಕದಾಸ ಸಮಾಜ ಸಂಘ (ರಿ.)ದ ಜಿಲ್ಲಾಧ್ಯಕ್ಷ ಹನುಮಂತ ಡೊಳ್ಳಿನ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.

ಸಮಾಜದಲ್ಲಿದ್ದ ಮೇಲು-ಕೀಳು ಭಾವ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಕುರಿತು ಸಂಕೀರ್ತನೆಗಳ ಮೂಲಕ ತೊಡೆದು ಹಾಕಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದವರು ಕನಕದಾಸರು. ಭಕ್ತಿ ಪರಂಪರೆಯ ದಾಸ ಸಾಹಿತ್ಯಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಜಾತಿ-ಮತ ಕುಲಗಳ ಭೇದ ತೊಡೆದುಹಾಕಲು ಸಾಹಿತ್ಯ ರಚಿಸಿ, ಸಂಕೀರ್ತನೆಗಳ ಮೂಲಕ ಸಮಾಜಕ್ಕೆ ಚಿಕಿತ್ಸೆ ನೀಡಿದರು. ಸಾಮಾಜಿಕ ಸಾಮರಸ್ಯಕ್ಕೆ ಮಹತ್ವ ನೀಡಿದ್ದ ಅವರ ಕೀರ್ತನೆಗಳು ಎಲ್ಲರಿಗೂ ದಾರಿದೀಪ. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ