ಜಿಲ್ಲೆ

ಉಡುಪಿ ನೂತನ ಜಿಲ್ಲಾಸ್ಪತ್ರೆಗೆ ಬಾಕಿ ಅನುದಾನ ನೀಡಿ...

ಅಧಿವೇಶನದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿ ನೂತನ ಜಿಲ್ಲಾ ಆಸ್ಪತ್ರೆ ಕಾಮಗಾರಿ ಅಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ತೊಡಕುಂಟಾಗುತ್ತಿದೆ. ಹೀಗಾಗಿ ಬಾಕಿ ಅನುದಾನ 48.36 ಕೋಟಿ ರೂ. ತಕ್ಷಣವೇ ಬಿಡುಗಡೆ ಮಾಡಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆರೋಗ್ಯ ಸಚಿವರಿಗೆ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಆಗಸ್ಟ್​ 14ರಂದು ಮಾತನಾಡಿ, ನೂತನ ಜಿಲ್ಲಾಸ್ಪತ್ರೆ ಕಾಮಗಾರಿ 2021ರ ಡಿಸೆಂಬರ್​ನಲ್ಲಿ ಪ್ರಾರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ. ಆದರೆ, ಮೂಲ ಅಂದಾಜಿನ ಅಂಶಗಳಲ್ಲಿ ಕೆಲವು ಕಾಮಗಾರಿಗಳ ಅಗತ್ಯ ಬದಲಾವಣೆ ಹಾಗೂ ಹೆಚ್ಚುವರಿ ಅಂಶ ಸೇರ್ಪಡೆಯಿಂದ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.

ಕರಾರು ದರ ಏರಿಕೆ

ಕಾಮಗಾರಿಗೆ 115 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ಲಭಿಸಿದ್ದು, ಟೆಂಡರ್​ ಮೊತ್ತ 110.24 ಕೋಟಿ ರೂ. ಇದೆ. ಈ ಮೊತ್ತದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಿಎಸ್​ಟಿ ಮೊತ್ತ ಸುಮಾರು 20.42 ಕೋಟಿ ರೂ. ಮತ್ತು ಟೆಂಡರ್​ ಕರಾರಿನಂತೆ ದರ ಏರಿಕೆ (ಪೆಸ್​ ಎಕ್ಸಲೇಶನ್​) ಮೊತ್ತ ಅಂದಾಜು 18.44 ಕೋಟಿ ರೂ.ವನ್ನು ಮೂಲ ಅಂದಾಜಿನಲ್ಲಿ ಅಳವಡಿಸಿಕೊಂಡಿಲ್ಲ ಎಂದರು.

ವರ್ಷಗಳಿಂದ ಮಂಜೂರಾತಿ ಬಾಕಿ

ಆಸ್ಪತ್ರೆಗೆ ಅವಶ್ಯವಿರುವ ಇನ್ನಿತರ ಕಾಮಗಾರಿಗಳಿಗಾಗಿ 9.50 ಕೋಟಿ ರೂ. ಸೇರಿ ಒಟ್ಟು 48.36 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಿದೆ. ಸದರಿ ಹೆಚ್ಚುವರಿ ಅಂಶಗಳನ್ನು ಪರಿಗಣಿಸಿ ಸರ್ಕಾರಕ್ಕೆ ಅನುಮೋದನೆ ಕೋರಿದ ಕಡತ ವರ್ಷಗಳಿಂದ ಮಂಜೂರಾತಿಗೆ ಬಾಕಿ ಉಳಿದಿದೆ. ವೈದ್ಯಾಧಿಕಾರಿಗಳು, ವೈದ್ಯಕೇತರ ಸಿಬ್ಬಂದಿ ಹುದ್ದೆಯೂ ಮಂಜೂರಾಗಿಲ್ಲ. ಹೆಚ್ಚುವರಿ ವೈದ್ಯಕೀಯ ಸಲಕರಣೆ ಖರೀದಿಗಾಗಿ 30 ಕೋಟಿ ರೂ. ಅನುದಾನದ ಪ್ರಸ್ತಾವನೆಯ ಮಂಜೂರಾತಿಯೂ ಬಾಕಿಯಿದೆ. ಆರೋಗ್ಯ ಇಲಾಖೆಯ ಸರ್ವರ್​ ಸಮಸ್ಯೆಯಿಂದಾಗಿ ಆಯುಷ್ಮಾನ್​ ಭಾರತ ಯೋಜನೆಯ ಸೌಲಭ್ಯದಿಂದ ರೋಗಿಗಳು ವಂಚಿತರಾಗುತ್ತಿದ್ದಾರೆ ಎಂದು ಶಾಸಕ ಯಶ್​ಪಾಲ್​ ಗಮನಕ್ಕೆ ತಂದರು.

ಮಂಜೂರಾತಿಗೆ ಶೀಘ್ರದಲ್ಲೇ ಕ್ರಮ

ಆರೋಗ್ಯ ಸಚಿವ ದಿನೇಶ ಗುಂಡೂರಾವ್​ ಪ್ರತಿಕ್ರಿಯಿಸಿ, ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಯ ಪ್ರಸ್ತಾವಿತ ಬೇಡಿಕೆಯ ಮೊತ್ತವನ್ನು ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲು ಹಾಗೂ ಮಂಜೂರು ಮಾಡಲು ಆದ್ಯತೆ ನೀಡಲಾಗುವುದು. ಅಗತ್ಯ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಮಂಜೂರು ಹಾಗೂ ಆಯುಷ್ಮಾನ್​ ಭಾರತ ಸೇವೆಗೆ ತೊಡಕಾಗುತ್ತಿರುವ ಸರ್ವರ್​ ಸಮಸ್ಯೆಗೂ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.