ಜಿಲ್ಲೆ

ಮಲ್ಪೆ ಔಟರ್​ ಹಾರ್ಬರ್​ ಪ್ರಸ್ತಾವನೆಗೆ ಮಂಜೂರಾತಿ ನೀಡುವಂತೆ ಸಚಿವರಿಗೆ ಶಾಸಕ ಯಶ್ಪಾಲ್​ ಸುವರ್ಣಮನವಿ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಬೋಟ್​ ಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸುಗಮ ಚಟುವಟಿಕೆಗೆ ಜಾಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಲ್ಪೆ ಪಡುಕೆರೆಯಲ್ಲಿ ಸುಮಾರು 6 ಸಾವಿರ ಬೋಟ್​ ನಿಲುಗಡೆ ಸಾಮರ್ಥ್ಯದ ಔಟರ್​ ಹಾರ್ಬರ್​ ನಿಮಾರ್ಣ ಹಾಗೂ ಪಡುಕೆರೆ ಸೇತುವೆ ಬಳಿ 500 ಮೀಟರ್​ ಜೆಟ್ಟಿ ಹಾಗೂ 100 ಮೀಟರ್​ ನಾಡದೋಣಿ ತಂಗುದಾಣದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಶಾಸಕ ಯಶ್ಪಾಲ್​ ಸುವರ್ಣ ಅವರು ಮೀನುಗಾರಿಕಾ ಸಚಿವ ಮಂಕಾಳ್​ ವೈದ್ಯ ಅವರಿಗೆ ಮನವಿ ಮಾಡಿದರು.

ಟೆಬ್ಮಾ ಶಿಪ್​ ಯಾರ್ಡ್​ಗೆ ನೀಡಿರುವ ಜಾಗದ ಲೀಸ್​ ಅವಧಿ ಮುಗಿದ ಕೂಡಲೇ ಜಾಗವನ್ನು ಮೀನುಗಾರಿಕೆ ಇಲಾಖೆ ಹಿಂಪಡೆದು ಮೀನುಗಾರಿಕೆ ಚಟುವಟಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವುದು, ಮಹಿಳಾ ಮೀನುಗಾರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಪಟ್ಟಣ ಸಹಕಾರಿ ಬ್ಯಾಂಕ್​ ಗಳ ಮೂಲಕ ಅನುಷ್ಠಾನ, ಮೀನುಗಾರರ ಬಹುದಿನಗಳ ಬೇಡಿಕೆಗಳಾದ ಸೀ ಆಂಬ್ಯುಲೆನ್ಸ್​, ಕಡಲ್ಕೊರೆತ ತಡೆಗೆ ತಡೆಗೋಡೆ ನಿಮಾರ್ಣ, ಬೋಟ್​ ಮರು ನಿಮಾರ್ಣದ ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ 5 ವರ್ಷ ಹಾಗೂ ಸ್ಟೀಲ್​ ಬೋಟಿಗೆ 7 ವರ್ಷಕ್ಕೆ ಕಡಿತಗೊಳಿಸುವುದು, ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಪ್ರತಿ ವರ್ಫಿ ಡ್ರೆಜಿಂಗ್​ ಕಾಮಗಾರಿ, ಮೀನುಗಾರಿಕೆ ದೋಣಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಡೀಸೆಲ್​ ಹಾಗೂ ಸೀಮೆ ಎಣ್ಣೆ ಪೂರೈಕೆ, ಅಂತಾರಾಜ್ಯ ಮೀನುಗಾರಿಕೆ ಸಮನ್ವಯ ಸಮಿತಿ ರಚನೆ ಮಾಡುವಂತೆ ಸಚಿವರಲ್ಲಿ ಪ್ರಸ್ತಾಪಿಸಿದರು.

ಕರಾವಳಿ ಜಿಲ್ಲೆಯ ಮೀನುಗಾರಿಕೆ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಸಂಘಟನೆಗಳ ಮುಖಂಡರೊಂದಿಗೆ ಉಡುಪಿಯಲ್ಲಿ ಸಭೆ ನಡೆಸುವಂತೆ ಹಾಗೂ ಕೇಂದ್ರ ಪುರಸತ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶ್ರೀದಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಚಿವರಿಗೆ ಸುವರ್ಣ ಕೋರಿಕೆ ಸಲ್ಲಿಸಿದರು.