ಜಿಲ್ಲೆ

ಜ. 22ಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಸಿಎಂಗೆ ಮನವಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರ, ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಐತಿಹಾಸಿಕ ಕ್ಷಣವನ್ನು ಆಚರಿಸಲು ಜ. 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಮಾಡಿದ್ದಾರೆ.

ಈ ವಿಶೇಷ ದಿನದಂದು ದೇಶದಾದ್ಯಂತ ಹಲವು ದೇವಸ್ಥಾನ, ಮಂದಿರ ಹಾಗೂ ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನಾ ಸಂಕೀರ್ತನೆ, ಅನ್ನ ಸಂತರ್ಪಣೆ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ಅಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಈ ಪವಿತ್ರ ದಿನವನ್ನು ಮನೆ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಆಚರಿಸಲು ಕರೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಪವಿತ್ರ ದಿನವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದ ಜನತೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರೆ.

ಉಡುಪಿಯಲ್ಲಿ ಬೆಳಕಿನ ರಾಮೋತ್ಸವ
ರಾಮ ದೇವರ ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ದಿನವನ್ನು ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಉಡುಪಿಯ ಜನತೆ ತಮ್ಮ ಮನೆ, ಕಚೇರಿ, ಕಟ್ಟಡಗಳಿಗೆ ದೀಪಾಲಂಕಾರ ಮಾಡಿ ರಾಮ ಜ್ಯೋತಿಯನ್ನು ಬೆಳಗುವ ಮೂಲಕ ದೇಶಕ್ಕೆ ಹೊಸ ಸಂದೇಶ ಸಾರುವಂತೆ ಶಾಸಕ ಯಶ್​ ಪಾಲ್​ ಸುವರ್ಣ ಮನವಿ ಮಾಡಿದ್ದಾರೆ.

ಜ. 14 ಮಕರ ಸಂಕ್ರಾತಿಯ ಶುಭ ದಿನದಿಂದ ಆರಂಭಗೊಂಡು, 18 ರಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ ಹಾಗೂ 22 ರಂದು ನಡೆಯುವ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ 25 ರವೆರೆಗೆ 10 ದಿನ ದೀಪಾಲಂಕಾರ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ. ಶ್ರೀ ಕೃಷ್ಣ್ಣ ಮಠದಲ್ಲಿ ಜನವರಿ 22 ರಂದು ವಿಶೇಷ ಹಾಲು ಪಾಯಸ ಸೇವೆ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕರಸೇವಕರ ಮೇಲೆ ಕೇಸ್​ ಮರುಜೀವ ಖಂಡನೀಯ
ಮೂರು ದಶಕಗಳ ಹಿಂದಿನ ರಾಮಜನ್ಮಭೂಮಿ ಕರ ಸೇವಕರ ಕೇಸ್​ಗೆ ರಾಜ್ಯ ಸರ್ಕಾರ ಮರುಜೀವ ನೀಡಿ, ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ಕಾನೂನು ಮೀರಿ ಸುಳ್ಳು ಕೇಸ್​ ಹಾಕಲಾಗಿದ್ದು, ಹಿಂದೂಗಳ ಭಾವನೆಯ ಜೊತೆ ಚೆಲ್ಲಾಟ ಆಡಬೇಡಿ ಎಂದು ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ದಶಕಗಳ ಹಿಂದಿನ ಪ್ರಕರಣವನ್ನು ಮತ್ತೆ ತೆರೆದು ಹಿಂದು ಕಾರ್ಯಕರ್ತರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸರ್ಕಾರ ಪೊಲೀಸ್​ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಮುಂದುವರಿದರೇ ಖಾಕಿ ಮೇಲೆ ಕೇಸರಿ ಬಟ್ಟೆ ಹಾಕುವ ದಿನ ಬರುತ್ತದೆ. ಈ ಆರು ತಿಂಗಳಲ್ಲಿ ಸರ್ಕಾರ ಬಹಳ ಗೊಂದಲದಲ್ಲಿದ್ದು, ನಾಟಕ ಮಾಡುತ್ತಾ ಜನರ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ. ಸೋನಿಯಾ ಸೇರಿದಂತೆ ಗಾಂಧಿ ಕುಟುಂಬದ ಹಳೆಯ ಕೇಸುಗಳು ಬಹಳಷ್ಟಿವೆ. ಜೇನುಗೂಡಿಗೆ ಕೈ ಹಾಕಬೇಡಿ, ಈ ಬೆಳವಣಿಗೆ ಅದಕ್ಕಿಂತಲೂ ಆಳವಾದದ್ದು ಎಂದು ಎಚ್ಚರಿಸಿದ್ದಾರೆ.