ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಇದ್ದಾರೆ. ಅವರೊಂದಿಗೆ ಕಾಂಗ್ರೆಸ್ ಸಂಸದರು ಸೇರಿಕೊಂಡರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಪಕ್ಷಗಳಿಂದ ಬಂದ ಮುಖಂಡರು, ಕಾರ್ಯಕರ್ತರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ. ಇದರಿಂದ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು, ಮುಖಂಡರು ಪಕ್ಷದಿಂದ ಹೊರಹೋಗಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕಿದೆ. ಜಿಲ್ಲೆಗೆ ರೈಲು ಮಾರ್ಗ ತರುವ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಅಗತ್ಯವಿದೆ. ಜಿಲ್ಲೆಗೆ ಈಗಾಗಲೇ ಇಬ್ಬರು ಶಾಸಕರ ಮೂಲಕ 500 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಸಮಸ್ಯೆಗಳಿದ್ದಲ್ಲಿ ಪಕ್ಷದೊಳಗಡೆ ಅದನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಮುಕ್ತ ಮನಸ್ಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸ್ಥಾನಮಾನಗಳು ಅರಸಿ ಬರಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆಮನೆಗೆ ತಿಳಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ಪಕ್ಷಕ್ಕಾಗಿ ದುಡಿದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಇಡೀ ದೇಶ ಕಾಂಗ್ರೆಸ್‌ಮಯವಾಗಲಿದೆ. ಪಕ್ಷದ ಬದ್ಧತೆ, ಸಿದ್ಧಾಂತಕ್ಕೆ ಮನಸೋತು ಬೃಹತ್ ಸಂಖ್ಯೆಯಲ್ಲಿ ಜನರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿದರು. ಇದೇ ಸಂದರ್ಭ ವಿಕ್ರಂ, ಪುನೀತ್, ಸೆಲ್ವಕುಮಾರ್, ಅನಿಲ್ ನೇತೃತ್ವದಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ನಟೇಶ್‌ಗೌಡ, ವಿವಿಧ ಘಟಕಗಳ ಪದಾಧಿಕಾರಿಗಳಾದ ಶೇಖ್ ಖಲೀಮುಲ್ಲಾ, ಟಿ.ಪಿ.ಹಮೀದ್, ಜೋಸೆಫ್ ವಿಕ್ಟರ್ ಸೋನ್ಸ್, ಶಿವಶಂಕರ್, ಕಿರಣ್‌ಕುಮಾರ್, ಎಂ.ಕೆ.ದಿನೇಶ್, ಕೆ.ಕೆ.ಮಂಜುನಾಥ್ ಕುಮಾರ್, ಶಾಜಿ, ಪ್ರಕಾಶ್, ಗೋವಿಂದಪ್ಪ, ಶಿವಕುಮಾರ್ ಮತ್ತಿತರರು ಇದ್ದರು.