ಹೊಳೆಹೊನ್ನೂರು: ಹೊಳಲೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಭೇಟಿ ನೀಡಿ ಗ್ರಾಮಸ್ಥರ ಆವಾಲು ಆಲಿಸಿದರು.
ಶಾಲೆಯಲ್ಲಿ ಕಳೆದ ತಿಂಗಳು ಕೊಳೆತ ತರಕಾರಿ ಬಳಸಿ ಬಿಸಿಯೂಟ ಸಿದ್ಧಪಡಿಸಿದ ಆರೋಪದಲ್ಲಿ ಮುಖ್ಯಶಿಕ್ಷಕಿ ವೀರಮ್ಮ ಅವರನ್ನು ಸೇವೆಯಿಂದ ತೆರವು ಮಾಡಿದ ಮೇಲೆ ಅಧಿಕಾರಿಗಳು ಮುಖ್ಯಶಿಕ್ಷಕಿಯ ಸ್ಥಾನಕ್ಕೆ ಬದಲಿ ಶಿಕ್ಷಕರ ವ್ಯವಸ್ಥೆ ಮಾಡದೆ ನಿರ್ಲಕ್ಷೃ ತೋರುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದಾಗಿ ನಿಗದಿತವಾಗಿ ತರಗತಿಗಳು ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಅದೇ ಶಿಕ್ಷಕಿಯನ್ನು ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಶಾಲೆಯ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದ ವೀರಮ್ಮನನ್ನು ಮತ್ತೆ ಇದೇ ಶಾಲೆಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಮತ್ತೆ ಅದೇ ಶಿಕ್ಷಕಿ ನಮಗೆ ಬೇಡ ಎಂದು ದೂರಿದರು.
ಬಳಿಕ ಡಿಡಿಪಿಐಗೆ ಕರೆೆ ಮಾಡಿದ ಶಾರದಾ ಪೂರ‌್ಯಾನಾಯ್ಕಾ ಅವರು, ಗ್ರಾಮಸ್ಥರು ಹಳೇ ಮುಖ್ಯಶಿಕ್ಷಕಿ ಪುನಃ ಇದೇ ಶಾಲೆಗೆ ಬರುವುದು ಬೇಡವೆಂದು ಪಟ್ಟುಹಿಡಿದಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಮರೆಯುವಂತಿಲ್ಲ. ಶಾಲೆಯಲ್ಲಿ ಶಿಕ್ಷಕರ ಸ್ಥಾನ ಖಾಲಿ ಇರುವುದರಿಂದ ಆದಷ್ಟು ಬೇಗ ಬದಲಿ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಹೇಳಿದರು.
ಮುಖಂಡರಾದ ಆಲದಹಳ್ಳಿ ರುದ್ರೇಶ್, ಸತೀಶ್ ಕಶೆಟ್ಟಿ, ಯೋಗೇಶ್, ಗಿರೀಶ್, ಜಿ.ಎಸ್.ಶಿವಪ್ಪ, ಶಕೀಲ್, ಮಂಜುನಾಥ್, ಸವಿತಮ್ಮ, ಸಂತೋಷ್ ಇತರರಿದ್ದರು.