ಮಳೆಗೆ ಮುಟ್ಟನಹಳ್ಳಿ-ಬೋರಾಪುರ ರಸ್ತೆಯಲ್ಲಿರುವ ಹೆಬ್ಬಾಳ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಕದಲೂರು ಉದಯ್ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಶಾಸಕರಿಂದ ಹೆಬ್ಬಾಳ ಸೇತುವೆ ಪರಿಶೀಲನೆ

ನಾಗೇಶ ಎಸ್

ಕೆ.ಎಂ.ದೊಡ್ಡಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಮುಟ್ಟನಹಳ್ಳಿ-ಬೋರಾಪುರ ರಸ್ತೆಯಲ್ಲಿರುವ ಹೆಬ್ಬಾಳ ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಕದಲೂರು ಉದಯ್ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಮುಟ್ಟನಹಳ್ಳಿ-ಬೋರಾಪುರ ರಸ್ತೆಯಲ್ಲಿ ದಿನನಿತ್ಯ ಸ್ಕೂಟರ್, ಕಾರು, ಕಬ್ಬಿನ ಗಾಡಿಗಳು ಮತ್ತು ಸಾರ್ವಜನಿಕರು ಸಂಚಾರ ಮಾಡುವ ರಸ್ತೆಯಾಗಿದ್ದು, ಈ ಭಾಗದ ರೈತರಿಗೆ ಈ ಸೇತುವೆಯಿಂದ ಅನುಕೂಲವಾಗುತ್ತಿದೆ. ಆದರೆ ಮಳೆಯಿಂದ ಸೇತುವೆ ಬಿರುಕು ಬಿಟ್ಟ ಪರಿಣಾಮ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ ಎಂದರು.

ಹೆಬ್ಬಾಳ ಸೇತುವೆಯಲ್ಲಿ ಹತ್ತಕ್ಕೂ ಹೆಚ್ಚು ತೂಬುಗಳಿದ್ದು, ಮಳೆಯಿಂದ ಗಿಡಗಂಟಿಗಳು ತೂಬಿನಲ್ಲಿ ಸಿಲುಕಿ ಸೇತುವೆ ಜಖಂಗೊಂಡಿದೆ. ಇದರಿಂದ ಸೇತುವೆ ಮೇಲೆ ನೀರು ಹರಿದು ಅಕ್ಕ-ಪಕ್ಕದ ಜಮೀನು ಜಲಾವೃತಗೊಂಡಿದೆ. ಮಳೆ ಬಂದಾಗಲೆಲ್ಲ ಈ ಸೇತುವೆ ಮೇಲೆ ನೀರು ಹರಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಬೆಳೆ ಹಾನಿಯಾಗಿರುವುದು ರೈತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಈ ಬಗ್ಗೆ ತಹಸೀಲ್ದಾರ್ ಜತೆ ಚರ್ಚಿಸಿದ್ದು, ರೈತರಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಜತೆ ಚರ್ಚಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ಸೇತುವೆ ನಿರ್ಮಾಣ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನೀಲಿನಕ್ಷೆ ತಯಾರಿಸುವಂತೆ ಸೂಚಿಸಿದ್ದೇನೆ ಎಂದು ಭರವಸೆ ನೀಡಿದರು.

ಈ ಭಾಗದ ರೈತರಿಗೆ ಬದಲಿ ರಸ್ತೆಯಲ್ಲಿ ಹೋಗುವ ವ್ಯವಸ್ಥೆ ಇರುವುದರಿಂದ ರೈತರು ತಾಳ್ಮೆಯಿಂದ ಇದ್ದರೆ, ಶೀಘ್ರದಲ್ಲೇ ಈ ಸೇತುವೆಗೆ ಶಾಶ್ವ್ವತವಾಗಿ ಪರಿಹಾರ ಮಾಡಲಾಗುವುದು. ಯಾವುದೇ ರೈತರಿಗೆ ತೊಂದರೆ ಆಗದಂತೆ 2-3 ತಿಂಗಳಲ್ಲೇ ಸೇತುವೆ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ರೈತರ ಜತೆ ನಾನು ಸದಾ ಇರುತ್ತೇನೆ. ದೇಶಕ್ಕೆ ಅನ್ನ ಕೊಡುವ ರೈತರಿಗೆ ಯಾವುದೇ ಅನನುಕೂಲವಾಗಬಾರದು. ರೈತರ ಕಷ್ಟಗಳಿಗೆ ಸ್ಪಂದಿಸುತ್ತ ಅವರ ಕಾರ್ಯಗಳನ್ನು ಸುಗಮವಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮುಖಂಡ ಮುಟ್ಟನಹಳ್ಳಿ ಮಹೇಂದ್ರ ಇದ್ದರು.