ಜಿಲ್ಲೆ

ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಬದ್ಧ

ಚಳ್ಳಕೆರೆ: ಶಿಲ್ಪಿಕಾರರಾಗಿ ಪಂಚ ಲೋಹಗಳ ಕಸುಬುದಾರಿಕೆಯಿಂದ ಇಡೀ ವಿಶ್ವಕ್ಕೆ ಚಿರಪರಿಚಿತ ವಾಗಿರುವ ವಿಶ್ವಕರ್ಮ ಜನಾಂಗ ಶೈಕ್ಷಣಿಕವಾಗಿ ಮತ್ತು ಸಮಾಜಮುಖಿಯಾಗಿ ಅಭಿವೃದ್ಧಿಯಾಗಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಶ್ವಕರ್ಮ ಸಮಾಜಾಭಿವೃದ್ಧಿ ಸಂಘ ಹಮ್ಮಿಕೊಂಡದ್ದ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮರು ಕಾಯಕದಲ್ಲಿ ಶ್ರಮ ಜೀವಿಗಳು.

ಕೌರವರಿಗೆ ಹಸ್ತಿನಾಪುರ, ಪಾಂಡವರಿಗೆ ಇಂದ್ರಪ್ರಸ್ಥ ನಿರ್ಮಿಸಿದವರು ಎನ್ನುವ ಕೀರ್ತಿ ಇದೆ ಎಂದರು.

ಈ ಸಮುದಾಯ ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯಲು ಸರ್ಕಾರದ ನೆರವು ದೊರೆಯಬೇಕಿದೆ. ಜನಾಂಗದ ಅಭಿವೃದ್ಧಿಗೆ ಕೆಲ ಯೋಜನೆಗಳ ಜಾರಿಗೆ ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ವಿಶ್ವಕರ್ಮರು ಸೂಕ್ಷ್ಮ ಕೆಲಸದ ಪ್ರವೀಣತೆ ಪಡೆದವರು. ಕೆಲ ಕುಟುಂಬದವರು ಬಂಗಾರದ ಕೆಲಸ ಮಾಡಿದರೂ, ಸಾಮಾಜಿಕವಾಗಿ ಮತ್ತು ಅಧಿಕಾರಿಗಳಿಂದಲೂ ತೊಂದರೆ ಅನುಭವಿಸಬೇಕಾಗುತ್ತದೆ.

ಇವರ ಸರ್ವಾಂಗೀಣ ಅಭಿವೃದ್ಧಿಗೆ ನೇರ ಸಾಲ ಮತ್ತು ಇತರೆ ಸೌಕರ್ಯಗಳಿಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ನಗರಸಭಾ ಸದಸ್ಯರಾದ ಕವಿತಾ, ವಿ.ವೈ.ಪ್ರಮೋದ್, ಸುಮ, ಸುಮಕ್ಕ, ಸಿ.ಶ್ರೀನಿವಾಸ್, ಮುಖಂಡರಾದ ಡಿ.ವೆಂಕಟೇಶ್ ಆಚಾರ್, ಆರ್.ಪ್ರಸನ್ನ ಕುಮಾರ್, ಎಲ್.ನಾರಾಯಣಾಚಾರ್, ಆರ್.ಮಂಜುಳ, ಬಿ.ಆರ್.ಕೃಷ್ಣಾಚಾರ್, ಜಗದೀಶ್ ಆಚಾರ್, ಪಿ.ತಿಪ್ಪೇಸ್ವಾಮಿ, ಎಂ.ರವೀಶ್ ಕುಮಾರ್, ಟಿ.ಜೆ.ವೆಂಕಟೇಶ, ಸಿ.ಚಂದ್ರಪ್ಪ, ಪಿ.ರಾಜಣ್ಣ, ಸತೀಶ್ ನಾಯ್ಕ, ಎಂ. ಸರಸ್ವತಮ್ಮ, ಹನುಮಂತ ಆಚಾರ್, ಬಿ.ಜಿ.ಶಶಿ ಕುಮಾರ್ ಇತರರಿದ್ದರು.