ಜಿಲ್ಲೆ

ರೈಲ್ವೆ ನಿಲ್ದಾಣ ಸ್ವಚ್ಛತೆಗೆ ಆದ್ಯತೆ ನೀಡಿ

ಬಾಗಲಕೋಟೆ : ಬಾಗಲಕೋಟೆ ರೈಲ್ವೆ ನಿಲ್ದಾಣಕ್ಕೆ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್, ವಿಭಾಗೀಯ ಮಹಾ ವ್ಯವಸ್ಥಾಪಕ ಅರವಿಂದ ಮಳಖೇಡ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ವೇಳೆ ನಿಲ್ದಾಣದ ಆವರಣದಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಅವರು ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಒಂದು ಗಂಟೆಗೆ ಹೆಚ್ಚು ಕಾಲ ಚರ್ಚೆ ನಡೆಸಿದರು.

ಆಸನಗಳ ವ್ಯವಸ್ಥೆ ಮಾಡಿ
ರೈಲ್ವೆ ನಿಲ್ದಾಣದಲ್ಲಿ ಪ್ರತಿಯೊಂದು ಪ್ಲಾಟ್‌ಫಾರ್ಮ್‌‌ಗಳಲ್ಲಿ ಪ್ರಯಾಣಿಕರಿಗೆ ಕೂಡಲು ಆಸನಗಳ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಮೇಲ್ಛಾವಣಿಗಳು ಮಳೆಯಾದರೆ ಸೂರುತ್ತಿವೆ. ಹೀಗಾಗಿ ಆಸನ ವ್ಯವಸ್ಥೆ ಸುಸಜ್ಜಿತವಾಗಿ ಕಲ್ಪಿಸಬೇಕು, ಮೇಲ್ಛಾವಣಿ ದುರಸ್ತಿಗೊಳಿಸಬೇಕು. ಇನ್ನು ರೈಲ್ವೆ ನಿಲ್ದಾಣದ ಆವರಣದಲ್ಲಿ ನಿರ್ಮಿಸುತ್ತಿರುವ ನೌಕರರ ವಸತಿ ಗೃಹಗಳ ಸುತ್ತಮುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಬೇಕು. ಒಳ, ಹೊರ ಆವರಣ ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಭಾಗೀಯ ಮಹಾ ವ್ಯವಸ್ಥಾಪಕ ಅರವಿಂದ ಮಳಖೇಡ, ರೈಲ್ವೆ ನಿಲ್ದಾಣದಲ್ಲಿ ಪ್ರತಿಯೊಂದು ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಇರುವ ಕಾರಣಕ್ಕೆ ದೇಶ, ವಿದೇಶದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಆಗಮಿಸುತ್ತಾರೆ. ಅವರೆಲ್ಲರಿಗೂ ಬಾಗಲಕೋಟೆ ಮಾದರಿ ರೈಲ್ವೆ ನಿಲ್ದಾಣದಂತೆ ಕಂಗೊಳಿಸಬೇಕು. ಹೀಗಾಗಿ ನಿತ್ಯವು ಶೌಚ, ಸ್ನಾನಗೃಹಗಳನ್ನು ಹಾಗೂ ನಿಲ್ದಾಣದ ಹೊರ, ಒಳ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಬೇಕು. ಇಲಾಖೆ ನೀಡುತ್ತಿರುವ ಸೇವೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಬಾಗಲಕೋಟೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಗದಗ, ಇಳಕಲ್ಲ ಹಾಗೂ ಗಜೇಂದ್ರಗಡ ಮಾರ್ಗದ ಸರ್ವೇ ಕಾರ್ಯ ನಡೆದಿರುವುದಾಗಿ ತಿಳಿಸಿದರು. ಈ ವೇಳೆ ಬಾಗಲಕೋಟೆ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಕಮಲ ಕಿಶೋರ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಾಪುರವರೆಗೆ ಕಾಮಗಾರಿಗೆ ಗುತ್ತಿಗೆ
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತಬುದ್ದೀನ್ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಕುಡಚಿ ಬಾಗಲಕೋಟೆ ಹೊಸ ರೈಲು ಮಾರ್ಗ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಬೇಕು. ನಿಲ್ದಾಣಕ್ಕೆ ಹೊಂದಿಕೊಂಡು ಇರುವ ಗೂಡ್ಸ್ ಯಾರ್ಡ್ ಸ್ಥಳಾಂತರಗೊಳಿಸಬೇಕು. ಬಾಗಲಕೋಟೆ ರೈಲು ನಿಲ್ದಾಣದ ಮುಂಬರುವ ದಿನಗಳಲ್ಲಿ ಜಂಕ್ಷನ್ ಆಗಲಿದ್ದು, ಅದಕ್ಕೆ ತಕ್ಕಂತೆ ರೈಲು ಗಾಡಿಗಳ ನಿರ್ವಹಣೆಗಾಗಿ ಫಿಟ್ ಲೈನ್ ನಿರ್ಮಾಣ ಮತ್ತು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ವಿಶ್ರಾಂತಿ ಗೃಹಗಳ ನಿರ್ಮಾಣ ಮಾಡಬೇಕು. ಬಾಗಲಕೋಟೆ ಕುಡಚಿ ಮಾರ್ಗಕ್ಕೆ ಅಗತ್ಯ ಇರುವ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದಕ್ಕೆ ಅಗತ್ಯವಿರುವ 226 ಕೋಟಿ ರೂ. ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿ ಕೆ.ರಾಜೇಂದ್ರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ 35 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಭೂ ಸ್ವಾಧೀನಕ್ಕೆ ಹಂತ ಹಂತವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಬಾಗಲಕೋಟೆಯಿಂದ ಕುಡಚಿವರೆಗೆ ಏಕಕಾಲಕ್ಕೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜನರಲ್ ಮ್ಯಾನೇಜರ್ ಅಜಯ ಸಿಂಗ್ ಮಾತನಾಡಿ, ಈಗಾಗಲೇ ಗೂಡ್ಸ್ ಯಾರ್ಡ್ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಬಾಗಲಕೋಟೆಯಿಂದ ಲೋಕಾಪುರವರೆಗೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗುತ್ತಿಗೆ ನೀಡಲಾಗುತ್ತದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಹೋರಾಟ ಸಮಿತಿ ಮುಖಂಡರಾದ ನಾರಾಯಣಸಾ ಪವಾರ, ವಿ.ಜಿ.ಪೂಜಾರ, ಮೈನುದ್ದೀನ್ ಖಾಜಿ ಇತರರು ಉಪಸ್ಥಿತರಿದ್ದರು.