ಜಿಲ್ಲೆ

ಉಚಿತವಾಗಿ ಸಿಗಲಿ ಆಯುಷ್ ಚಿಕಿತ್ಸೆ: ಶಾಸಕ ವೀರಭದ್ರಯ್ಯ

ಮಧುಗಿರಿ: ಆಯುಷ್ ಆರೋಗ್ಯ ಚಿಕಿತ್ಸೆ ಎಲ್ಲ ಬಡವರಿಗೂ ಉಚಿತವಾಗಿ ಸಿಗಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.

ಪುರಸಭೆಯ ಹಳೆಯ ಕಟ್ಟಡದಲ್ಲಿ ರಾಜ್ಯ ಆಯುಷ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಂಪರೆಯ ಚಿಕಿತ್ಸಾ ವಿಧಾನದಲ್ಲಿ ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧವಿದ್ದು, ಇದು ನಿಧಾನಗತಿಯಲ್ಲಿ ಶಾಶ್ವತ ಪರಿಹಾರ ನೀಡಬಲ್ಲದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಜೀವಮೂರ್ತಿ ಮಾತನಾಡಿ, ಎಲ್ಲ ಬಡವರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಆಯುಷ್ ಚಿಕಿತ್ಸೆ ಪಡೆದರೆ ಕಾಯಿಲೆಗೆ ಶಾಶ್ವತ ಪರಿಹಾರ ಸಾಧ್ಯವಿದೆ. ಎಲ್ಲವೂ ಆಯುರ್ವೇದದ ಔಷಧ. ಜನರಿಗೆ ಅನುಕೂಲ ಕಲ್ಪಿಸಲು ಆಯುಷ್ ಇಲಾಖೆಯು ಆರೋಗ್ಯ ಇಲಾಖೆಯೊಂದಿಗೆ ನಿಕಟವಾಗಿ ಸಂಪರ್ಕಹೊಂದಿದ್ದು, ಸುಸ್ಥಿತಿಯ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ ಗುರಿ ಹೊಂದಿದೆ ಎಂದರು. ಪುರಸಭೆ ಸದಸ್ಯ ಎಂ.ಎಲ್.ಗಂಗರಾಜು ಮಾತನಾಡಿ, ಹಿಂದೆ ಸಣ್ಣ ಕೊಠಡಿಯಲ್ಲಿದ್ದ ಈ ಇಲಾಖೆಯನ್ನು ಬೃಹತ್ ಕಟ್ಟಡದಲ್ಲಿ ಪ್ರಾರಂಭಿಸಿ 10 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮಾರ್ಪಡಿಸಿದ್ದಾರೆ. ಈ ಕಾರ್ಯದಿಂದ ತಾಲೂಕಿನ ಜನತೆಗೆ ಉತ್ತಮ ಆರೋಗ್ಯಕರ ಯೋಜನೆ ನೀಡಿದಂತಾಗಿದೆ ಎಂದರು.

ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರಬಾಬು, ನಾರಾಯಣ್, ನರಸಿಂಹಮೂರ್ತಿ, ಚಂದ್ರಶೇಖರ್, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೇಬಲ್ ಸುಬ್ಬು, ಇಲಾಖೆಯ ವೈದ್ಯರಾದ ಡಾ.ಮಾರುತಿ ನವಲೆ, ಗುರುಪ್ರಸಾದ್, ಪ್ರಭಾಕರ್, ಜಯಶ್ರೀ, ಕಾವ್ಯಾ, ಕಾಮರಾಜ್, ಅತೀಕ್ ಅಹ್ಮದ್, ವಸಂತ, ಶೋಭಾದೇವಿ, ಶೇಖರಯ್ಯ ಮಠಪತಿ, ಸಯೀದ ಪರ್ವೀನ್, ನಿಧಿ ಇದ್ದರು.

ಪಂಚಕರ್ಮ ಚಿಕಿತ್ಸೆ ಮಧುಗಿರಿಯ ಎಲ್ಲ ಬಡವರಿಗೂ ಲಭ್ಯವಾಗಲಿದೆ. 50 ಲಕ್ಷ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯು ಯಶಸ್ವಿಯಾಗಿ ಅನುಷ್ಠಾನವಾಗುವಂತೆ ವೈದ್ಯರು ಕ್ರಮವಹಿಸಬೇಕಿದೆ. ಎಂ.ವಿ.ವೀರಭದ್ರಯ್ಯ ಶಾಸಕ