ಜಿಲ್ಲೆ

ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ : ಶಾಸಕ ವೇದವ್ಯಾಸ ಕಾಮತ್ ಭರವಸೆ

Mangaluru - Hariprasad Rai



ಮಂಗಳೂರು : ಮಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.
ಎಕ್ಕೂರು, ತೋಚಿಲ ಕಟ್ಟಪುಣಿ, ರಾಷ್ಟ್ರೀಯ ಹೆದ್ದಾರಿ ಬಳಿಯ ವೈದ್ಯನಾಥ ನಗರ, ಜಪ್ಪಿನಮೊಗರುವಿನ ಗಣೇಶ ನಗರ, ರಾಜಕಾಲುವೆ ಸೇರುವ ನೇತ್ರಾವತಿ ತೀರದ ಕಡೇಕಾರು ಪ್ರದೇಶ ಮುಂತಾದ ಪ್ರದೇಶ ವೀಕ್ಷಿಸಿದರು. ನೆರೆ ಪರಿಸ್ಥಿತಿಗೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಪರಿಹಾರ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಸ್ಥಳೀಯರ ಅಭಿಪ್ರಾಯದ ಮೇರೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಎಕ್ಕೂರಿನ ಧ್ರುವ ರೆಸಿಡೆನ್ಸಿ ಸಮೀಪದ ರಾಜಕಾಲುವೆ ಬಳಿ ಇರುವ ಬೃಹತ ಖಾಸಗಿ ಕಾಂಪೌಂಡ್ ಕುಸಿದಿದ್ದೇ ಜಪ್ಪಿನಮೊಗರು, ಗಣೇಶ ನಗರ ಪರಿಸರ, ದೊಂಪದ ಬಲಿ, ಹೊಯ್ಗೆ ರಾಶಿ, ಮುಳುಗಡೆಯಾಗಲು ಕಾರಣವಾಗಿದೆ, ಕೆಲವೆಡೆ ಇದೇ ಮೊದಲ ಬಾರಿ ನೆರೆ ಬಂದಿದ್ದರೆ, ಉಳಿದೆಡೆ ಈ ಹಿಂದೆಯೂ ಸಮಸ್ಯೆ ತಲೆದೋರಿತ್ತು, ಇಲ್ಲಿನ ಗದ್ದೆ ಪ್ರದೇಶಗಳಲ್ಲೇ ಅತೀ ಹೆಚ್ಚು ಮನೆ ನಿರ್ಮಾಣಗೊಂಡಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಸಮಸ್ಯೆ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 75 ಕೋಟಿ ರೂ. ವಿಶೇಷ ಅನುದಾನದ ಮೂಲಕ ಕ್ಷೇತ್ರದ ಹಲವು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರಕ್ಕೆ ಬಿಡಿಗಾಸು ದೊರೆತಿಲ್ಲ, ಹೀಗಾಗಿ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿ ಸಹಿತ ಪಾಲಿಕೆ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿ ತಾತ್ಕಾಲಿಕ ಪರಿಹಾರ ಕೈಗೊಂಡು, ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಮನಪಾ ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ, ಎಇಇ ರಾಜೇಶ್, ಸಣ್ಣ ನೀರಾವರಿ ಇಲಾಖೆಯ ರಾಕೇಶ್, ಪಿಡಬ್ಲುಡಿ ಇಂಜಿನಿಯರ್ ಸೂರಜ್, ಗ್ರಾಮ ಲೆಕ್ಕಾಧಿಕಾರಿ ರೂಪಾ, ಬಿಜೆಪಿ ಪ್ರಮುಖರಾದ ವೀಣಾ ಮಂಗಳ, ಭರತ್ ಕುಮಾರ್, ಕಿರಣ್ ರೈ, ಸುರೇಂದ್ರ ರಾವ್ ಉಪಸ್ಥಿತರಿದ್ದರು.