ಜಿಲ್ಲೆ

ಯಕ್ಷಗಾನಕ್ಕೆ ಅಡ್ಡಿ ಕಾಂಗ್ರೆಸ್‌ನ ಹೀನ ಮನಸ್ಥಿತಿಗೆ ಕೈಗನ್ನಡಿ - ಶಾಸಕ ವೇದವ್ಯಾಸ ಕಾಮತ್

Mangaluru - Hariprasad Rai


ಮಂಗಳೂರು : ಯಕ್ಷಗಾನವನ್ನು ಪೊಲೀಸರ ಮೂಲಕ ಅರ್ಧಕ್ಕೆ ನಿಲ್ಲಿಸುವ ಮೂಲಕ ಕಲೆಗೆ ಅವಮಾನಿಸಲು ಯತ್ನಿಸಿರುವುದು ಕಾಂಗ್ರೆಸ್‌ನ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಕಳದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಂದರ್ಭ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕನ ಫೋನ್ ಕರೆಯ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿ, ಆಯೋಜಕರನ್ನು ಬಂಧಿಸಲು ಮುಂದಾಗಿರುವುದು. ಖಂಡನೀಯ. ಇದೀಗ ಯಕ್ಷಗಾನ ಆಯೋಜನೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದ್ದು ಇಂತಹ ಘಟನೆಗಳ ವಿರುದ್ದ ಹೋರಾಡದಿದ್ದರೆ ಮುಂದಿನ ದಿನಗಳಲ್ಲಿ ಅವರು ತುಳುನಾಡ ಪರಂಪರೆಯಾದ ಕೋಲ, ನೇಮ, ಕಂಬಳ, ಜಾತ್ರೆಗೂ ಅಡ್ಡಿಪಡಿಸಲು ಈ ಸರ್ಕಾರ ಹೇಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕರಾವಳಿಯ ಕಲೆ ಹಾಗೂ ಧಾರ್ಮಿಕತೆಯ ನಂಬಿಕೆಗೆ ಧಕ್ಕೆಯುಂಟು ಮಾಡಿ ದರ್ಪ ತೋರಿದ ಕಾಂಗ್ರೆಸ್ಸಿಗರು ಸಾರ್ವಜನಿಕವಾಗಿ ಕ್ಷಮೆ ಕೇಳುವುದರ ಜತೆಗೆ ದ್ವೇಷದಿಂದ ದಾಖಲಾಗಿರುವ ಪ್ರಕರಣವನ್ನು ಬೇಷರತ್ ಹಿಂಪಡೆಯಬೇಕೆಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.