ಜಿಲ್ಲೆ

ಸರ್ಕಾರದ ವ್ಯವಸ್ಥೆಗಳಿಂದ ಮಾಹಿತಿ ಸೋರಿಕೆ ಸೈಬರ್ ವಂಚನೆಗೆ ರಹದಾರಿ: ಶಾಸಕ ಕಾಮತ್





ಮಂಗಳೂರು : ನಿವೇಶನ, ಫ್ಲಾೃಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಯಲ್ಲಿ
ಬಯೋಮೆಟ್ರಿಕ್ ನೀಡಿದ ಹಲವು ಜನರ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿ ಲಕ್ಷಾಂತರ ರೂ.ವಂಚಿಸಿರುವುದು
ಆಘಾತಕಾರಿ ಘಟನೆಯಾಗಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಕಳೆದ ತಿಂಗಳಿನಿಂದ ಸಾರ್ವಜನಿಕರು ಜಾಗ ಮಾರಾಟ ಮತ್ತು ಖರೀದಿಗಾಗಿ ಬಯೋಮೆಟ್ರಿಕ್ ನೀಡಿದ ಕೆಲವೇ ದಿನಗಳಲ್ಲಿ ಖಾತೆಯಿಂದ 10 ಸಾವಿರ ರೂ. ಡ್ರಾ ಆಗುತ್ತಿರುವ ಬಗ್ಗೆ ದೂರುಗಳು ದಾಖಲಾಗಿವೆ. ನೋಂದಣಿ ಕಚೇರಿಗೆ ಯಾವುದೇ ಒಬ್ಬ ವ್ಯಕ್ತಿ ಬಯೋಮೆಟ್ರಿಕ್ ಕೊಟ್ಟ ಮೇಲೆ ಅದು ಸೈಬರ್ ವಂಚಕರಿಗೆ ಹೇಗೆ ತಲುಪುತ್ತಿದೆ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸರ್ಕಾರಿ ಕಚೇರಿಯಿಂದ ಮಾಹಿತಿ ಸೋರಿಕೆಯಾಗಿ ಸಾರ್ವಜನಿಕರು ಹೀಗೆ ಅನ್ಯಾಯವಾಗಿ ಹಣ ಕಳೆದುಕೊಂಡರೆ ಅದರ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ರಾಜ್ಯ ಸರ್ಕಾರ ಅಧಿಕೃತವಾಗಿ ದೂರು ಸಲ್ಲಿಸಿದ ಎಲ್ಲ ಸಂತ್ರಸ್ತರಿಗೆ ಹಣ ಮರಳಿಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮೂಡುಶೆಡ್ಡೆಯ ಕೂಲಿ ಕಾರ್ಮಿಕನೊಬ್ಬ ತಾನು ಕಷ್ಟ ಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟಿದ್ದ ಹತ್ತು ಸಾವಿರ ರೂ. ಇದೇ ಮಾದರಿಯಲ್ಲಿ ಕಳೆದುಕೊಂಡಿದ್ದು ಗಮನಕ್ಕೆ ಬಂದಿದೆ. ಉಪನೋಂದಣಿ ಕಚೇರಿ ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಇಲ್ಲಿಂದಲೇ ಸೈಬಎದ ವಂಚಕರಿಗೆ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ಬ್ಯಾಂಕ್ ಖಾತೆಯಿಂದ ಹಣ ದೋಚಲಾದರೆ ಇನ್ನು ಜನಸಾಮಾನ್ಯರು ಯಾರನ್ನು ನಂಬುವುದು? ಸರ್ಕಾರ ಈ ಬಗ್ಗೆ ನಿರ್ಲಕ್ಷ ವಹಿಸುವುದು ಬಿಟ್ಟು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.