ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆಯಿಂದ ಉಂಟಾಗಿರುವ ಅವ್ಯವಸ್ಥೆ
ಸಹಿತ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳ ಸಭೆ ನಡೆಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿದಿದ್ದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ರಾಜಕಾಲುವೆಗಳಲ್ಲಿ ಸಮರ್ಪಕವಾಗಿ
ಹೂಳೆತ್ತುವ ಕಾಮಗಾರಿ ನಡೆಯದ ಕಾರಣ ಮನೆಗಳಿಗೆ ಮಳೆ ನೀರು ನುಗ್ಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಮಳೆಯಿಂದ ತೊಂದರೆಗೀಡಾದವರಿಗೆ ಪಾಲಿಕೆ ವತಿಯಿಂದ ಯಾವುದೇ ನೆರವು ಸಿಗುತ್ತಿಲ್ಲ. ಕಸ ವಿಲೇವಾರಿಯ ಅವ್ಯವಸ್ಥೆಯ ಬಗ್ಗೆಯೂ ಜನರಿಂದ ದೂರುಗಳು ಬರುತ್ತಿವೆ ಎಂದು ಶಾಸಕರು ಈ ಸಂದರ್ಭ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಬಲ್ಲಾಲ್‌ಬಾಗ್ ಬಳಿ ಶಿಥಿಲಗೊಂಡಿರುವ ರಾಜಕಾಲುವೆಯ ಬ್ರಿಡ್ಜ್‌ನಿಂದ ನೀರು ಸರಾಗವಾಗಿ ಹರಿಯದೇ ಅದರಿಂದಲೂ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಯಾವುದನ್ನೂ ಹಗುರವಾಗಿ ಪರಿಗಣಿಸದೆ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ಮನಪಾ ಆಯುಕ್ತ ರವಿಚಂದ್ರ ನಾಯಕ್, ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.