ಮಂಗಳೂರು: ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕಂದಾಯ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ತೊಂದರೆಯಾಗುವ ಇಂತಹ ನಿಯಮಗಳನ್ನು ಏಕಾಏಕಿ ಇಡೀ ರಾಜ್ಯದಲ್ಲಿ ಜಾರಿಗೊಳಿಸುವ ಮೊದಲು ಯಾವುದಾದರೂ ಒಂದೆರಡು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಅದರ ಸಾಧಕ-ಭಾದಕಗಳನ್ನು ನೋಡಿಕೊಂಡು ನಂತರವೇ ರಾಜ್ಯಕ್ಕೆ ಅನ್ವಯಿಸಬೇಕಿತ್ತು. ಅದು ಬಿಟ್ಟು ಧಿಡೀರನೆ ಆತುರದಿಂದ ಕೈಗೊಂಡ ನಿರ್ಧಾರದಿಂದ ಎಲ್ಲವೂ ಅಯೋಮಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ 2.0 ತಂತ್ರಾಂಶ ಜೋಡಣೆಯ ನಂತರವಂತೂ ಸಮಸ್ಯೆ ಉಲ್ಬಣವಾಗಿದ್ದು ಯಾವಾಗ ನೋಡಿದರೂ ಸರ್ವರ್ ಡೌನ್, ದಾಖಲೆಗಳು ಅಪ್‌ಲೋಡ್ ಆಗುತ್ತಿಲ್ಲ ಎಂಬ ಉತ್ತರ ಸಿಗುತ್ತಿದೆ. ಮದುವೆ, ಸಾಲ ಇತ್ಯಾದಿ ಅಗತ್ಯ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿಗಳ ಮೂಲಕ ಹಣವನ್ನು ಹೊಂದಿಸಿಕೊಳ್ಳಲೂ ಸಾಧ್ಯವಾಗದೇ ಸಾವಿರಾರು ಜನರು ಈ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಾ ಪರಿತಪಿಸುತ್ತಿದ್ದಾರೆ ಎಂದರು.
ಟ್ಯಾಕ್ಸಿ ಚಾಲಕರ ಲೂಟಿ:
ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಉತ್ತಮ ಉದ್ದೇಶದೊಂದಿಗೆ ಜಾರಿಗೆ ತಂದ ಮೋಟಾರು ವಾಹನಗಳ ನಿಯಮ-2018 ಅನ್ನು ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರನ್ನು ಲೂಟಿ ಮಾಡಲು ಬಳಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆದಿದ್ದೇನೆ ಎಂದರು.
ಮುಖಂಡರಾದ ರಮೇಶ್ ಕಂಡೆಟ್ಟು, ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಲಲ್ಲೇಶ್, ರಮೇಶ್ ಹೆಗ್ಡೆ ಇದ್ದರು.
ಮುಡಾ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಬರ್ಂಧ!
ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶ ನಿಬರ್ಂಧಿಸುವ ಕ್ರಮವಿಲ್ಲ. ಆದರೆ ಮಂಗಳೂರಿನ ಮುಡಾ ಕಚೇರಿ ಒಳಗೆ ಯಾವ ಸಾರ್ವಜನಿಕರಿಗೂ, ವಕೀಲರುಗಳಿಗೂ ಈಗ ಪ್ರವೇಶ ನಿಬರ್ಂಧಿಸಲಾಗಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದ್ದು ಕೆಟ್ಟ
ದಾಖಲೆಯೊಂದು ನಮ್ಮ ಮಂಗಳೂರಿನ ಹೆಸರಿನಲ್ಲಿ ದಾಖಲಾಗಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.