ಜಿಲ್ಲೆ

ಹೇಳಿಕೆ ಹಿಂಪಡೆಯಲು ಶಾಸಕರಿಗೆ ಒತ್ತಾಯ

ವೀರೇಶ ಸೌದ್ರಿ

ಲಕ್ಷ್ಮೇಶ್ವರ: ಪಟ್ಟಣದ ಪೇಟೆ ಹನುಮಂತದೇವರ ದೇವಸ್ಥಾನದಿಂದ ಬಳಿಗಾರ ಓಣಿಯವರೆಗಿನ ಸಿಸಿ ರಸ್ತೆ ಕಾಮಗಾರಿಗೆ ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಯಿಂದ ಅಡ್ಡಿಪಡಿಸುತ್ತಿದ್ದಾರೆ. ಇಂತಹವರ ವಿರುದ್ಧ ಪೊಲೀಸರು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬೇಕು ಎಂಬ ಹೇಳಿಕೆಯನ್ನು ಶಾಸಕ ಡಾ.ಚಂದ್ರು ಲಮಾಣಿ ಹಿಂಪಡೆಯಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಸುರೇಶ ನಂದೆಣ್ಣವರ ಒತ್ತಾಯಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಪಟ್ಟಣದ ದೂದನಾನಾ ದರ್ಗಾ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಶಾಸಕರು ನೀಡಿರುವ ಶಾಸಕ ಹೇಳಿಕೆ ಸರಿಯಲ್ಲ. ರಸ್ತೆ ಕಾಮಗಾರಿಗೆ ಬಳಸಲಾಗಿರುವ ಮಣ್ಣು ಕಳಪೆಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್ ಒಪ್ಪಿಕೊಂಡಿದ್ದಾರೆ. ಆದರೆ, ಜಿದ್ದಿಗೆ ಬಿದ್ದಿರುವ ಶಾಸಕರು ಧಾರವಾಡದಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಯೋಗ್ಯವಾಗಿದೆ ಎಂಬ ವರದಿ ತರಿಸಿದ್ದಾರೆ. ಮಣ್ಣು ಪರೀಕ್ಷೆ ತಪ್ಪು ವರದಿ ನೀಡಿದ ಖಾಸಗಿ ಸಂಸ್ಥೆಯ ಮೇಲೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು. ಆದರೆ ಸಾರ್ವಜನಿಕರೆ ಸ್ವಂತ ಖರ್ಚಿನಿಂದ ಮಣ್ಣು ಪರೀಕ್ಷೆ ಮಾಡಿಸಿದಾಗ ಯೋಗ್ಯವಲ್ಲ ಎನ್ನುವ ವರದಿ ಬಂದಿದೆ. ಲಕ್ಷಾಂತರ ರೂ. ಮೊತ್ತದ ಕಾಮಗಾರಿ ಗುಣಮಟ್ಟದ್ದಾಗಬೇಕು ಎಂಬ ಸಾರ್ವಜನಿಕ ಹಿತಾಸಕ್ತಿಗೆ ಶಾಸಕರು ವೈಯಕ್ತಿಕ ಹಿತಾಸಕ್ತಿ ಎಂಬ ಆರೋಪ ಮಾಡಿದ್ದಾರೆ. 3 ತಿಂಗಳಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಪ್ರಾರಂಭಿಸುವ ಬದಲಾಗಿ ಅದೇ ರಸ್ತೆಯ ಮುಂದುವರಿದ ಕಾಮಗಾರಿಗೆ ಭೂಮಿಪೂಜೆ ಮಾಡಿರುವುದು ಮತ್ತು ಈ ವಿಷಯದಲ್ಲಿ ಜನರ ನಡುವೆ ಒಡಕು ಮೂಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಮಾತನಾಡಿ, ಪಟ್ಟಣದಲ್ಲಿ ನೀರಿನ ಹೊಸ ಪೈಪ್‌ಲೈನ್ ಅಳವಡಿಸಲು 36 ಕೋಟಿ ರೂ. ಅನುದಾನ ನೀಡಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. 140 ಕೋಟಿ ರೂ. ಅನುದಾನದಲ್ಲಿ ತಾಲೂಕಿನ 20 ಕೆರೆ ನೀರು ತುಂಬಿಸುವ ಯೋಜನೆ ಹಾಗೂ ಪಟ್ಟಣದಲ್ಲಿ 40 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿವೆ. 50 ಎಕರೆಗಿಂತ ಹೆಚ್ಚು ಜಮೀನು ಖರೀದಿಯಾಗಿದ್ದರೂ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಲಾಗುತ್ತಿಲ್ಲ. 10 ಕೋಟಿ ರೂ. ವೆಚ್ಚದ ನಗರೋತ್ಥಾನ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ದೂರಿದರು.

ಶಂಕ್ರಪ್ಪ ಗುರಿಕಾರ, ಗುರಪ್ಪ ಮುಳಗುಂದ, ಶಿವಪ್ಪ ಡಂಬಳ, ಗಂಗಾಧರ ಅಂಕಲಿ, ಛಾಯಪ್ಪ ಬಸಾಪೂರ, ಸುಭಾನ್ ಹೊಂಬಳ, ವಿಶ್ವನಾಥ ವಾರದ, ಮಂಜುನಾಥ ಮುಳಗುಂದ, ಸುರೇಶ ಹಟ್ಟಿ, ರಾಜು ಲಿಂಬಿಕಾಯಿ, ಪವನ ಬಂಕಾಪೂರ, ಮಾಲತೇಶ ಕರ್ಜೆಕಣ್ಣವರ, ಶಂಕ್ರಣ್ಣ ಮುಳಗುಂದ, ವಿರೂಪಾಕ್ಷಪ್ಪ ಬಳಿಗಾರ ಇತರರಿದ್ದರು.