ಜಿಲ್ಲೆ

ಶಾಸಕ ಮಹೇಶ ಟೆಂಗಿನಕಾಯಿ ಹೇಳಿಕೆ, ಶೆಟ್ಟರ್ ಯಾವ ಬೇಡಿಕೆ ಇಟ್ಟಿದ್ದಾರೆ ಗೊತ್ತಿಲ್ಲ

Dharwada - Basavaraj Idli

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪ್ಸಿ' ವೇಳೆ ಯಾವ ಬೇಡಿಕೆ ಇಟ್ಟಿದ್ದಾರೆಂಬುದು ಗೊತ್ತಿಲ್ಲ, ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡೇ ಅವರನ್ನು ಹೈಕಮಾಂಡ್ ಪಕ್ಷಕ್ಕೆ ಬರಮಾಡಿಕೊಂಡಿದೆ. ಹೈಕಮಾಂಡ್ ತೀರ್ಮಾನವನ್ನು ನಾವೆಲ್ಲ ಸ್ವಾಗತ ಮಾಡುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಹೈಕಮಾಂಡ್ ಸ್ಥಳಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಚೌಕಟ್ಟಿನ ಮಧ್ಯೆ ನಡೆಯುವ ಸಂಧಾನ ಇದು. ಮಾತುಕತೆ ನಡೆಯುತ್ತಿರುತ್ತವೆ. ಅವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ. ಈ ಸಂಧಾನದಲ್ಲಿ ಕೇಂದ್ರ ಸಚಿವ ಜೋಶಿ ಅವರು ಭಾಗಿಯಾಗದೇ ಇದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನಿರ್ಧಾರ ಮಾಡಿರುತ್ತದೆ ಎಂದರು.

ಶೆಟ್ಟರ್ ಅವರೊಂದಿಗೆ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ- ಕಾಂಗ್ರೆಸ್ ಪರಸ್ಪರ ಟೀಕೆ ಮಾಡುವುದು ಸಹಜ. ಈಗ ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಎಲ್ಲರೂ ಕೂಡಿ ಇರುತ್ತೇವೆ ಎಂದರು.