ಜಿಲ್ಲೆ

ಬಸ್​ನಿಲ್ದಾಣದ ಕಾಮಗಾರಿ ವೀಕ್ಷಿಸಿದ ಶಾಸಕ ಟೆಂಗಿನಕಾಯಿ

ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ನವೀಕರಣ ಕಾಮಗಾರಿಯ ಪರಿಶೀಲನೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಬುಧವಾರ ನಡೆಸಿದರು.

ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಮಳೆನೀರು ಬಸ್ ನಿಲ್ದಾಣದಲ್ಲಿ ನಿಲ್ಲದಂತೆ ಹಾಗೂ ನಿಲ್ದಾಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಕೈಗೊಂಡಿರುವ ಕ್ರಮದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳಂತೆ ಬಸ್ ನಿಲ್ದಾಣದಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಯಿಂದ ಪರಿಸರ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ಬಸ್ ನಿಲ್ದಾಣ ನವೀಕರಣ ಕಾಮಗಾರಿಯ ನೀಲನಕ್ಷೆಯನ್ನು ಪರಿಶೀಲಿಸಿ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಸೂಚಿಸಿದರು.

ನಿಲ್ದಾಣದ ಸೌಂದಯೀಕರಣ, ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಕಲ್ಪಿಸುವ ವ್ಯವಸ್ಥೆಗಳು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ಸಾರಿಗೆ ಸಂಸ್ಥೆ ಡಿವಿಜನ್ ಕಂಟ್ರೋಲರ್ ರಾಮನಗೌಡರ, ಎಕ್ಸಿಕ್ಯುಟಿವ್ ಇಂಜಿನೀಯರ್ ದಿವಾಕರ, ಶಿವಕುಮಾರ , ಪ್ರಶಾಂತ ಶೆಟ್ಟಿ, ಪ್ರಮುಖರಾದ ಪ್ರವೀಣ ಪವಾರ, ರಾಮನಗೌಡ ಶೆಟ್ಟೆನಗೌಡರ ಹಾಗೂ ಇತರರು ಹಾಜರಿದ್ದರು.