ಜಿಲ್ಲೆ

ತಲಾ 15 ಲಕ್ಷ ರೂ. ಪರಿಹಾರ ಕೊಡಲು ಟೆಂಗಿನಕಾಯಿ ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ. ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಧನ ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.

ನಗರದ ಕೆಎಂಸಿಆರ್‌ಐಗೆ ಮಂಗಳವಾರ ಭೇಟಿ ನೀಡಿ ಗಾಯಾಳು ಅಯ್ಯಪ್ಪ ಮಾಲಾಧಾರಿ ಆರೋಗ್ಯ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೃತರೆಲ್ಲರೂ ಬಡತನದಲ್ಲಿದ್ದವರು. ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅವರ ಕುಟುಂಬಗಳು ಈಗ ಅತಂತ್ರವಾಗಿವೆ ಎಂದರು.

ಈಗಾಗಲೇ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಘೋಷಣೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಇಂತಹ ಘಟನೆಗಳು ಸಂಭವಿಸಿದಾಗ ವಿಶೇಷ ಪ್ರಕರಣವೆಂದು ಪರಿಗಣನೆ ಮಾಡಿ ಕನಿಷ್ಠ ತಲಾ 15 ಲಕ್ಷ ರೂ. ಪರಿಹಾರ ಧನ ನೀಡಿದರೆ ಮೃತ ಕುಟುಂಬಸ್ಥರಿಗೆ ಆಧಾರವಾಗುತ್ತದೆ ಎಂದರು.

ನಾಳೆ ಬೆಂಗಳೂರಿಗೆ ನಾನು ತೆರಳಲಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜತೆಗೂ ಮಾತನಾಡುತ್ತೇನೆ. ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.