ಜಿಲ್ಲೆ

ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂದು ಪ್ರಶ್ನಿಸಿದ ಶಾಸಕ ಟಿ.ಎಸ್. ಶ್ರಿವತ್ಸ

ಮೈಸೂರು: ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಕ್ರೆಡಿಟ್ ಭಾರತೀಯ ಸೇನೆಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂದು ಶಾಸಕ ಟಿ.ಎಸ್. ಶ್ರಿವತ್ಸ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುದ್ಧದಲ್ಲಿ ಕೇಂದ್ರ ಸರ್ಕಾರದ ಪಾಲು ಏನಿದೆ ಎಂದು ಕಾಂಗ್ರೆಸ್‌ನವರು ಪ್ರಶ್ನಿಸಿದರೆ ಗ್ಯಾರಂಟಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ಸರ್ಕಾರದ ಪಾತ್ರವೇನಿದೆ ಎಂದು ನಾವು ಮುಖ್ಯಮಂತ್ರಿಯನ್ನು ಕೇಳಬೇಕಾಗುತ್ತದೆ. ಕಾಂಗ್ರೆಸ್‌ನವರ ಮಾತಿನ ಪ್ರಕಾರ ಹೇಳುವುದಾದರೆ ಗ್ಯಾರಂಟಿ ಯೋಜನೆಯ ಶ್ರೇಯಸ್ಸು ಅಧಿಕಾರಿಗಳಿಗೆ ಸಲ್ಲಬೇಕು ಎಂದು ಹೇಳಿದರು.

ಭಾರತ-ಪಾಕಿಸ್ತಾನ ನಡುವಿನ ಕದನವನ್ನು ಯಾರು ಸಹ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಬಿಜೆಪಿ ಸಹ ಯುದ್ಧದ ಯಶಸ್ಸು ಸೇನೆಗೆ ಸಲ್ಲಬೇಕು ಎಂದು ಹೇಳಿದೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಆಗಿದೆ. ಮುಂದೇನಾದರೂ ಉಲ್ಲಂಘನೆ ಆದರೆ ಸುಮ್ಮನೆ ಬಿಡೋದಿಲ್ಲ ಎಂಬ ಎಚ್ಚರಿಕೆಯ ಸ್ಪಷ್ಟ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೀಡಿದ್ದಾರೆ. ಪಾಕಿಸ್ತಾನ ಯಾವುದೇ ಹೋರಾಟ ಮಾಡದೆ ಹುಟ್ಟಿರುವ ರಾಷ್ಟ್ರ. ನಾವು ಸಾವಿರಾರು ವರ್ಷಗಳಿಂದ ಪರಕೀಯರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ನೆಲದ ಮಹತ್ವವೇ ಹೋರಾಟದ ಮನೋಭಾವದಿಂದ ಕೂಡಿದೆ ಎಂದರು.

ನಾವು ಪಾಕಿಸ್ತಾನದಂತೆ ಯಾರೋ ನೀಡಿರುವ ಭಿಕ್ಷೆಯಲ್ಲಿ ಬದುಕುತ್ತಿಲ್ಲ. 75 ವರ್ಷದ ಹಿಂದೆ ದೇಶ ವಿಭಜನೆಯಿಂದ ಉದಯವಾದ ಪಾಕಿಸ್ತಾನ ಉಗ್ರವಾದಕ್ಕೆ ಬೆಂಬಲ ಕೊಡುತ್ತಾ ಬಂದಿದೆ. ಹಿಂದುಗಳನ್ನು ಹುಡುಕಿ ಕೊಲ್ಲುವ ಮಟ್ಟಕ್ಕೆ ಉಗ್ರವಾದ ಬೆಳೆದಿದೆ. ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಇದಕ್ಕೆ ಕಾರಣವಾದ ಭಾರತೀಯ ಸೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.