ಜಿಲ್ಲೆ

ಎಚ್ಡಿಕೆಗೆ ಅಗೌರವಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಕಾರಣ

ಪ್ರಸಿನ್ ಕೆ.ಆರ್

ಹಾಸನ: ಜಿಲ್ಲಾಡಳಿತ ಕೇಂದ್ರ ಸಚಿವ ಕುಮಾರಸ್ವಾಮಿಗೆ ಅಗೌರವ ತೋರಿಸಿರುವ ವಿಚಾರದಲ್ಲಿ ಶೇ.90ರಷ್ಟು ಪಾಲು ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಅವರದ್ದು ಇದೆ ಎಂದು ಮಾಜಿ ಶಾಸಕ ಪ್ರೀತಂಗೌಡ ಆರೋಪಿಸಿದರು.

ಸ್ಥಳೀಯ ಶಾಸಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಗೌರವ ಕೊಟ್ಟಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮುಖ್ಯದ್ವಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಒಬ್ಬ ಜವಾಬ್ದಾರಿಯುವ ನಾಗರೀಕನಾಗಿ ಕೆಲಸ ಮಾಡುವವರಿಗೆ ಇದು ಬಾಲಿಷ ಅನ್ನಿಸುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮನೆಯ ಕಾರ್ಯಕ್ರಮದ ರೀತಿಯಲ್ಲಿ ಸ್ಥಳೀಯ ಶಾಸಕರು ಕೆಲಸ ಮಾಡಬೇಕು. ಹಾಸನಾಂಬ ಉತ್ಸವ ಅಂದರೆ ಹಾಸನ ಕ್ಷೇತ್ರದ ತಾಯಿಯ ಉತ್ಸವ. ನಾನು ಶಾಸಕನಾಗಿ ನಾಲ್ಕು ವರ್ಷ ಜಾತ್ರಾ ಮಹೋತ್ಸವ ಮಾಡಿದ್ದೇನೆ. ವಿಪರ್ಯಾಸ ಅಂದರೆ ಶಾಸಕರು ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಉತ್ಸವದ ಯಾವುದೇ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿಲ್ಲ. ಈಗ ಬಂದು ನನ್ನನ್ನು ನಿರ್ಲಕ್ಷೃ ಎಂದು ಹೇಳುತ್ತಿದ್ದಾರೆ ಎಂದರು.

ಜಾತ್ರೆ ಮಹೋತ್ಸವ ಮೊದಲೇ ನಿಶ್ಚಯವಾಗಿರುತ್ತದೆ. ಸ್ಥಳೀಯ ಶಾಸಕರು ಬಹಳ ಮುತುವರ್ಜಿಯಿಂದ ಕೆಲಸ ಮಾಡಬೇಕು. ಅಂತಹ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಗೆಸ್ಟ್ ರೀತಿಯಲ್ಲಿ ಹಾಸನಾಂಬ ದೇವಿ ಬಾಗಿಲು ತೆರೆಯುವಾಗ ಬಂದು ಇವತ್ತು ದಿಢೀರ್ ಅಂಥ ಹತ್ತು, ಹನ್ನೆರಡು ದಿನ ಆದ ಮೇಲೆ ನನಗೆ ಗೌರವ ಕೊಡ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಡಿಸಿ, ಉಸ್ತುವಾರಿ ಸಚಿವರನ್ನು ದೂಷಿಸುವುದು ಸುಲಭ. ಡಿಸಿ ಅವರು ಈ ವರ್ಷ ಇರುತ್ತಾರೆ. ಮುಂದಿನ ವರ್ಷ ಬೇರೆಯವರು ಇರುತ್ತಾರೆ. ಉಸ್ತುವಾರಿ ಸಚಿವರು ಕೂಡ ಇವತ್ತು ಇರುತ್ತಾರೆ. ಸರ್ಕಾರ ಬದಲಾದರೆ ಬೇರೆಯವರು ಬರುತ್ತಾರೆ. ಆದರೆ ಐದು ವರ್ಷಗಳ ಕಾಲಕ್ಕೆ ನಮ್ಮ ಹಾಸನವನ್ನ್ನು, ಕ್ಷೇತ್ರವನ್ನು ಪ್ರತಿನಿಧಿಸುವಂತೆ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಆ ಶಾಸಕರು ಜವಾಬ್ದಾರಿ ಹೊರಬೇಕಾಗುತ್ತದೆ. ಗೌರವವನ್ನು ಕೇಳಿ ಪಡೆಯುವುದಲ್ಲ, ದುಡಿಮೆ ಮಾಡಿ ಪಡೆಯಬೇಕು ಎಂದರು.

ಶಾಸಕರಾಗಿ ನಿಮಗೆ ಮೂರನೇ ಜಾತ್ರಾ ಮಹೋತ್ಸವ. ಗೆಸ್ಟ್ ಆಗಿ ಪಾಲ್ಗೊಂಡು ಈಗ ಗೌರವ ಕೊಡುತ್ತಿಲ್ಲ ಎಂಬುದು ಸರಿಯಾದ ಕ್ರಮ ಅಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೆಳಗ್ಗಿನ ಜಾವ ಬಂದು ನಿಂತು ಪ್ರಯತ್ನ ಮಾಡುತ್ತಿದ್ದಾರೆ. ನೀವು ಯಾವ ಭಕ್ತರನ್ನು ಮಾತನಾಡಿಸಿ ಸಮಸ್ಯೆ ಕೇಳಿದ್ದೀರಿ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗೌರವ ಕೊಟ್ಟಿಲ್ಲ ಎಂಬುದಕ್ಕೆ ನನ್ನ ಸಹಮತ ಇದೆ. ಕುಮಾರಸ್ವಾಮಿ ಅವರು ಎನ್‌ಡಿಎ ಸರ್ಕಾರದ ಕ್ಯಾಬಿನೆಟ್ ಸಚಿವರು. ಅವರಿಗೆ ಯಾರಾದರೂ ಅವಮಾನ ಮಾಡಿದ್ದರೆ ಅದಕ್ಕೆ ಸ್ವರೂಪ್‌ಪ್ರಕಾಶ್ ವೈಫಲ್ಯ ಕಾರಣವಾಗಿದೆ. ಸ್ಥಳೀಯ ಶಾಸಕರಾದವರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಅವರಿಗೆ ಸನ್ಮಾನ ಮಾಡಿ ಗೌರವ ಕೊಡಬೇಕಿತ್ತು ಎಂದರು.

ಚುನಾಯಿತ ಪ್ರತಿನಿಧಿಯಾಗಿ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳದೆ ಹೋದರೆ ಶಾಸಕರಾಗಿರುವುದು ಏಕೆ ಎಂದು ಜನರಿಗೆ ತಿಳಿಸಬೇಕು. ಯಾವುದೇ ಚುನಾಯಿತ ಪ್ರತಿನಿಧಿ ಬಂದರು ಅವರಿಗೆ ಏನು ಗೌರವ ಕೊಡಬೇಕು ಅದನ್ನು ಕೊಡಬೇಕು. ಶಾಸಕರಿಗೆ ಹಾಸನಾಂಬ ಜಾತ್ರಾ ಮಹೋತ್ಸವ ಹೇಗೆ ನಡೆಯುತ್ತದೆ ಎಂಬುದೇ ಗೊತ್ತಿಲ್ಲ. ಅವರ ತಂದೆ ಹಾಗೂ ಪಕ್ಷದ ಶಕ್ತಿಯಿಂದ ಅವರು ಶಾಸಕರಾಗಿದ್ದಾರೆ. ಇನ್ನೂ ಸಮಯ ಇದೆ ನಿಮ್ಮ ಜವಾಬ್ದಾರಿ ಅರಿತುಕೊಳ್ಳಿ ಎಂದರು.

ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ? ಸ್ವರೂಪ್‌ಪ್ರಕಾಶ್ ಅವರು ಸಾವಿರ ಪಾಸ್ ಪಡೆದಿದ್ದಾರೆ? ಆಗ ಗೋಲ್ಡ್ ಪಾಸ್ ಬೇಡ ಅಂಥ ಹೇಳಬೇಕಿತ್ತು. ವಿದೇಶ ಪ್ರವಾಸಕ್ಕೆ ಹೋಗುವ ಬದಲು ತಾವೇ ಮುನ್ನೆಡೆಸಿದ್ದರೆ ಇದು ಆಗುತ್ತಿರಲಿಲ್ಲ. ಕೂಡಲೇ ಸ್ವರೂಪ್‌ಪ್ರಕಾಶ್ ಅವರು ಕುಮಾರಸ್ವಾಮಿ ಅವರನ್ನು ಕ್ಷಮೆ ಕೇಳಬೇಕು. ಮುಂದೆ ಜವಾಬ್ದಾರಿ ಅರಿತು ಶಾಸಕರಾಗಿ ಕೆಲಸ ನಿರ್ವಹಿಸಬೇಕು. ನಮ್ಮ ಹಾಸನದ ಗೌರವ ಹೆಚ್ಚಿಸಬೇಕು ಎಂದರು.