ಜಿಲ್ಲೆ

ಸಾರಿಗೆ ಹಬ್‌ಗೆ ಜಮೀನು ನೀಡದ ಕೆಐಎಡಿಬಿ ನಡೆಗೆ ಶಾಸಕ ಸುರೇಶ್‌ಕುಮಾರ್ ಆಕ್ಷೇಪ

ಬೆಂಗಳೂರು: ನಗರದ ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಿಸುವ ಪ್ರಸ್ತಾಪಕ್ಕೆ ಜಮೀನು ಮಂಜೂರು ಮಾಡದೆ ಪಂಚತಾರಾ ಹೋಟೆಲ್ ಹಾಗೂ ಮಾಲ್ ಪರ ನಿಲುವು ಹೊಂದಿರುವ ಕೆಐಎಡಿಬಿ ನಡೆ ವಿರೋಧಿಸಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ರಾಜಧಾನಿಯಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಏರ್‌ಪೋರ್ಟ್‌ಗೆ ಮೆಟ್ರೋ ಸೌಲಭ್ಯ ಸೇರಿ ಇತರ ಸಾರಿಗೆ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ರೂಪದಲ್ಲಿ ಹಬ್ ನಿರ್ಮಿಸುವ ಪ್ರಸ್ತಾಪ ಇದೆ. ಇಕ್ಕೆ ಬೇಕಿರುವ 45 ಎಕರೆ ಜಮೀನುನ್ನು ಮಂಡಳಿ ನಿಗದಿ ಪಡಿಸುವ ಬೆಲೆಯನ್ನು ಪಾವತಿಸಲು ಬಿಎಂಆರ್‌ಸಿಎಲ್ ಸಿದ್ಧವಿದೆ. ಆದರೆ, ವರ್ಷ ಕಳೆದರೂ ಜಮೀನು ಮಂಜೂರಾತಿ ಪ್ರಸ್ತಾಪದ ಬಗ್ಗೆ ನಗರಾಭಿವೃದ್ಧಿ ಹಾಗೂ ಕೈಗಾರಿಕೆ ಇಲಾಖೆಗಳು ವಿಳಂಬ ಮಾಡುತ್ತಿವೆ. ಸಾರ್ವಜನಿಕ ಉದ್ದೇಶದ ಯೋಜನೆಗಳಿಗೆ ತ್ವರಿತವಾಗಿ ಜಮೀನು ನೀಡಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸಲು ಸಹಕರಿಸಬೇಕು ಎಂದು ಶಾಸಕರು ಸಿಎಂರನ್ನು ಕೋರಿದ್ದಾರೆ.

ಭೂಸ್ವಾಧೀನ ವಿಳಂಬದಿಂದ ನಾನಾ ಸಮಸ್ಯೆ:

ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಯೋಜನೆಗಳಿಗೆ ತನ್ನ ನೆರವನ್ನು ವಿಸ್ತರಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆದರೆ, ಭೂಸ್ವಾಧೀನ ವಿಳಂಬವು ಸಮಯ ಹಾಗೂ ವೆಚ್ಚದ ಮಿತಿ ಮೀರುವಿಕೆಗೆ ಕಾರಣವಾಗುತ್ತದೆ. ಕೇಂದ್ರದ ಸಕಾಲಿಕ ಅನುದಾನ ಬಿಡುಗಡೆ ಮತ್ತು ಮೆಟ್ರೋ ಸೇವೆಗಳ ವಿಸ್ತರಣೆಗೆ ತೊಡಕುಂಟಾಗುತ್ತದೆ. ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಲಾಬಿಗೆ ಸರ್ಕಾರ ಮಣಿಯದೆ ಅಂತಹ ಎಲ್ಲ ಪ್ರಯತ್ನವನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕು. ಖಾಸಗಿ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕಿರುವ ಹಿನ್ನೆಲೆಯಲ್ಲಿ ಸಾರಿಗೆ ಹಬ್‌ಗೆ ಅಗತ್ಯ ಜಮೀನು ಮಂಜೂರು ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದು ಸುರೇಶ್‌ಕುಮಾರ್ ತಮ್ಮ ಪತ್ರದ ಮೂಲಕ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.