ಹನೂರಿನ ಉಪ ನೋಂದಣಿ ಕಚೇರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.  
ಜಿಲ್ಲೆ

ಹನೂರು ಉಪ ನೋಂದಣಿ ಕಚೇರಿಗೆ ಶಾಸಕ ದಿಢೀರ್ ಭೇಟಿ

ಅಭಿನಯ್ ಎಚ್.ಎಂ

ಹನೂರು: ಪಟ್ಟಣದ ಉಪ ನೋಂದಣಿ ಕಚೇರಿಗೆ ಸೋಮವಾರ ಶಾಸಕ ಎಂ.ಆರ್. ಮಂಜುನಾಥ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಉಪ ನೋಂದಣಾಧಿಕಾರಿ ಉಷಾ ಹಾಗೂ ನೌಕರರಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ಆಸ್ತಿಪಾಸ್ತಿಗಳ ನೋಂದಣಿಗೆ ಹೆಚ್ಚಾಗಿ ರೈತರು ಹಾಗೂ ಬಡವರು ಕಚೇರಿಗೆ ಆಗಮಿಸುತ್ತಾರೆ. ಆದರೆ ನಿಗದಿತ ವೇಳೆಯಲ್ಲಿ ಕೆಲಸ ಆಗುತ್ತಿಲ್ಲ ಎಂಬುದಾಗಿ ಸಾರ್ವಜನಿಕರಿಂದ ಸಾಕಾಷ್ಟು ದೂರುಗಳು ಬಂದಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ದಾಖಲೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡಬೇಕು ಎಂದು ಎಚ್ಚರಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಒಂದು ವೇಳೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖಂಡರಾದ ಮಂಜೇಶ್, ಗೋಪಾಲ್ ನಾಯಕ, ಮಹಾದೇವ, ವೆಂಕಟೇಶ್, ನಟರಾಜು ಇತರರು ಇದ್ದರು.