ಜಿಲ್ಲೆ

ಮುಡಾ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಶಾಸಕ ಶ್ರೀವತ್ಸ ಆಗ್ರಹ

ಮೈಸೂರು: ಮುಡಾ ಆಯುಕ್ತರಾಗಿ ವರ್ಗಾವಣೆಗೊಂಡಿರುವ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹಿಸಿ ಶಾಸಕ ಟಿ.ಎಸ್.ಶ್ರೀವತ್ಸ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳು ಅಕ್ರಮ ಎಸಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಿನೇಶ್‌ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವ ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಪ್ರಾಧಿಕಾರದ ವತಿಯಿಂದ ಯಾವುದೇ ನಿರ್ಣಯ ಕೈಗೊಳ್ಳದಂತೆ ಸೂಚಿಸಲಾಗಿತ್ತು. ಆದರೆ, ಸರ್ಕಾರದ ಸೂಚನೆ ಉಲ್ಲಂಘಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿರುತ್ತಾರೆ ಎಂದೂ ದೂರಿದ್ದಾರೆ.


ಭೂಸ್ವಾಧೀನ ಪ್ರಕ್ರಿಯೆ ನಡೆಸದೇ ಖಾಸಗಿ ಜಮೀನುಗಳನ್ನು ನೇರವಾಗಿ ಪ್ರಾಧಿಕಾರ ಬಳಸಿಕೊಂಡು ಇದಕ್ಕೆ ಬದಲಾಗಿ ಬದಲಿ ನಿವೇಶನಗಳನ್ನು ನೀಡುವಂತಹ ನಿರ್ಣಯ ಕೈಗೊಳ್ಳುವಂತಿಲ್ಲ. ಇದರ ಹೊರತಾಗಿಯೂ ಇಂತಹ ಪ್ರಸಂಗಗಳು ಉದ್ಭವಿಸಿದ್ದಲ್ಲಿ ನೇರವಾಗಿ ಪ್ರಾಧಿಕಾರದ ಆಯುಕ್ತರನ್ನು ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಮುಡಾ ಆಯುಕ್ತರಾಗಿ ಸರ್ಕಾರದ ಸುತ್ತೋಲೆಗಳನ್ನು ಪರಿಗಣಿಸದೇ ಕಾನೂನುಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಶ್ರೀವತ್ಸ ದೂರಿದ್ದಾರೆ.


ಇಂತಹ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಸಾಲದು. ಆದ ಕಾರಣ ದಿನೇಶ್ ಕುಮಾರ್ ಅವರೊಂದಿಗೆ ಇತರ ಅಧಿಕಾರಿಗಳನ್ನೂ ಕೂಡಲೇ ಅಮಾನತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.