ಜಿಲ್ಲೆ

ನನ್ನನ್ನು ಹುಡುಕಬೇಕಿಲ್ಲ, ನಾನೇ ಸಿಗುತ್ತೇನೆ

ಶಿವರಾಜ.ಎಂ

ಶಾಸಕ ಎನ್.ಶ್ರೀನಿವಾಸ್ ಭರವಸೆ

ತ್ಯಾಮಗೊಂಡ್ಲು ಪಟ್ಟಣದಲ್ಲಿ ಸಾರ್ವಜನಿಕರೊಂದಿಗೆ ಸಂವಾದ

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ನಾನು ಸಾಮಾನ್ಯರಲ್ಲಿ ಸಾಮಾನ್ಯ, ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ, ನನ್ನನ್ನು ಭೇಟಿ ಮಾಡಲು ಹುಡುಕಬೇಕಿಲ್ಲ, ನಾನೇ ಮುಕ್ತವಾಗಿ ನಿಮಗೆ ಸಿಗುತ್ತೇನೆ.!
ಹೀಗೆಂದವರು ನೆಲಮಂಗಲದ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾ ಅಧಿಕಾರಿಗಳ ಜತೆ ಪಟ್ಟಣವನ್ನು ಸುತ್ತಾಡಿದ ಶಾಸಕರು, ಸಾರ್ವಜನಿಕರ ಕುಂದುಕೊರತೆ ಆಲಿಸಿ ಆತ್ಮೀಯತೆಯಿಂದ ಕುಶಲೋಪರಿ ವಿಚಾರಿಸಿದರು. ನಿಗದಿತ ಸಮಯದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಮುಕ್ತವಾಗಿ ಸಿಗುತ್ತೇನೆ ಎಂದರು.
ಚುನಾವಣೆ ಮುಗಿದ ಮೇಲೆ ಸತತ ಪ್ರವಾಸದ ಕಾರಣ ತ್ಯಾಮಗೊಂಡ್ಲು ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಗಿರಲಿಲ್ಲ, ಆದ್ದರಿಂದ ಈಗ ಪಟ್ಟಣಕ್ಕೆ ಅಧಿಕಾರಿಗಳ ಜತೆಯಲ್ಲೇ ಬಂದಿದ್ದು ಇಲ್ಲಿನ ಸಮಸ್ಯೆ ತಿಳಿದು ಸ್ಥಳದಲ್ಲೇ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಪಟ್ಟಣದಲ್ಲೇ ನಮ್ಮ ಕಚೇರಿ: ಈಗ ತ್ಯಾಮಗೊಂಡ್ಲು ಪಟ್ಟಣದಲ್ಲೇ ನಮ್ಮ ಕಚೇರಿ ಪ್ರಾರಂಭ ಮಾಡಲಿದ್ದು, ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಸಿಗುವ ವ್ಯವಸ್ಥೆ ಮಾಡುತ್ತಿದ್ದೇನೆ, ನಿಮ್ಮ ಸೇವೆಗೆ ಅವಕಾಶ ನೀಡಿದ್ದೀರಿ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.
ತ್ಯಾಮಗೊಂಡ್ಲು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಮನವಿ ಬಂದಿದೆ. ಈ ಬಗ್ಗೆ ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದ್ದೆ. ಈಗ ಒಂದೇ ಬಾರಿ ಪುರಸಭೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಪಟ್ಟಣದ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ.ಅನುದಾನ ತಂದಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಬೇಗೂರು-ನಿಡವಂದ ರಸ್ತೆ ಕಾಮಗಾರಿ ಬೇಗ ಮುಗಿಸಲು ಸೂಚಿಸಿದ್ದೇನೆ, ಪಟ್ಟಣದ ಮುಖ್ಯರಸ್ತೆಯನ್ನು ದ್ವಿಪಥ ರಸ್ತೆಯೊಂದಿಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕೆಲಸ ಕೂಡ ಆಗಲಿದೆ, ಸಾರ್ವಜನಿಕರು ಹಲವು ಸಮಸ್ಯೆಗಳ ಅರ್ಜಿ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೆ ಭೇಟಿ ನೀಡಲಿದ್ದು ಅಷ್ಟರಲ್ಲೆ ಅವರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಮುಂದಿನ 5 ವರ್ಷಗಳಲ್ಲಿ ಮಾದರಿ ಪಟ್ಟಣ ಮಾಡಲು ಶ್ರಮಿಸುತ್ತೇನೆ ಎಂದರು.
ಜಾಗ ಗುರುತಿಸಿ ಕೊಡಿ: ಯುವಕರಿಗೆ ಕ್ರೀಡಾಂಗಣ, ಬಸ್‌ನಿಲ್ದಾಣ, ಸ್ಮಶಾನ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಮನವಿ ಮಾಡಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಕ್ರೀಡಾಂಗಣ ಮತ್ತು ಸ್ಮಶಾನಕ್ಕೆ ಗೋಮಾಳ ಜಮೀನಿನ ಮಾಹಿತಿ ಕಲೆ ಹಾಕಿ ಗುರುತಿಸಿಕೊಡಲು ಅಧಿಕಾರಿಗಳಿಗೆ ತಿಳಿಸಿದರು. ರಾಜಕೀಯವೇನಿದ್ದರೂ ಚುನಾವಣೆ ವೇಳೆಯಲ್ಲಷ್ಟೇ, ಬಳಿಕ ಅಭಿವೃದ್ಧಿ ಜಪದೊಂದಿಗೆ ಕೆಲಸ ಮಾಡಬೇಕು, ಪಕ್ಷಾತೀತವಾಗಿ ಎಲ್ಲರ ಸಮನ್ವಯದೊಂದಿಗೆ ಜನಸೇವೆ ಮಾಡುತ್ತೇನೆ ಎಂದರು.