ಜಿಲ್ಲೆ

ಭಯೋತ್ಪಾದನೆಯಿಂದ ಭಯದ ವಾತಾವರಣ: ಶಾಸಕ ಶ್ರೀನಿವಾಸ್

ಗುಬ್ಬಿ: ಶೋಷಿತವರ್ಗಕ್ಕೆ ನ್ಯಾಯ ಕಲ್ಪಿಸಿ ಸಾಮಾಜಿಕ ಸಮಾನತೆ ತಂದ ಸಂವಿಧಾನದಡಿಯಲ್ಲಿ ಮೀಸಲಾತಿ ಪಡೆಯುವವರೇ ಮತ್ತೆ ಮತ್ತೆ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕ ವರ್ಗ ತಯಾರಿಸುವ ಮಾನವ ಸಂಪನ್ಮೂಲ ಅವಶ್ಯವಿದೆ ಎಂದರು. ಶಾಂತಿ ಕದಡುವ ಕೃತ್ಯಗಳಲ್ಲಿ ವಿದ್ಯಾವಂತರ ಪಾಲು ಇರುವುದು ಆತಂಕಕಾರಿ ವಿಷಯ. ಸಮಾಜ ಕಟ್ಟುವ ಕೆಲಸಗಳಲ್ಲಿ ನಿತರ ಶೈಕ್ಷಣಿಕ ಜಿಲ್ಲೆಯಲ್ಲೂ ಭಯೋತ್ಪಾದನೆ ಭಯದ ವಾತಾವರಣ ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ವಿಶ್ವದಲ್ಲಿ ತನ್ನದೇ ವೈಶಿಷ್ಟತೆಗಳಿಸಿಕೊಂಡ ನಮ್ಮ ಸಂವಿಧಾನ ಸಾಮಾಜಿಕ ನ್ಯಾಯ ಕಲ್ಪಿಸುವತ್ತ ಸಾಗಿದೆ. ಸಮಾಜಘಾತುಕ ಶಕ್ತಿಗಳನ್ನು ದಮನ ಮಾಡುವ ಜತೆಗೆ ಉತ್ತಮ ಶಿಕ್ಷಣ, ಸಾಮಾಜಿಕ ವ್ಯವಸ್ಥೆ ಕಟ್ಟೋಣ. ಹಸಿರು, ನೀಲಿ, ಶ್ವೇತ ಕ್ರಾಂತಿ ಮೂಲಕ ಅಭಿವೃದ್ಧಿ ಕಂಡು ರಾಷ್ಟ್ರಕ್ಕಾಗಿ ಏನು ನೀಡಿದ್ದೇವೆ ಎನ್ನುವ ಉನ್ನತ ಯೋಚನೆ ಅಳವಡಿಸಿಕೊಂಡು ರಾಷ್ಟ್ರ ಕಟ್ಟೋಣ ಎಂದು ಹೇಳಿದರು.

ವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸ್, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್-ಗೈಡ್ಸ್, ಗೃಹ ರಕ್ಷಕದಳ ಆಕರ್ಷಿತ ಕವಾಯತು ಪ್ರದರ್ಶಿಸಿದವು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಬಿಆರ್‌ಸಿ ಸಿದ್ದಲಿಂಗಸ್ವಾಮಿ, ಜಿಪಂ ಸದಸ್ಯರಾದ ಕೆ.ಯಶೋಧಮ್ಮ, ಜಿ.ಎಚ್.ಜಗನ್ನಾಥ್, ತಾಪಂ ಅಧ್ಯಕ್ಷೆ ಅನಸೂಯ, ಪಪಂ ಸದಸ್ಯರಾದ ಮಹಮದ್ ಸಾದಿಕ್, ಶೌಕತ್ ಆಲಿ, ಮಂಗಳಮ್ಮ, ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ತಾಪಂ ಇಒ ನರಸಿಂಹಯ್ಯ ಇದ್ದರು.

ರಾಷ್ಟ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂವಿಧಾನ ಮಹತ್ವದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದರ ಜತೆಗೆ ರಾಷ್ಟ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಗುಬ್ಬಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಉಂಡೆರಾಮಯ್ಯ ಹೇಳಿದರು, ಪಟ್ಟಣದ ಶ್ರೀಕೃಷ್ಣ ಪ್ರೌಢಶಾಲೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಸಂವಿಧಾನದ ಪುಸ್ತಕ ವಿತರಿಸಿ ಮಾತನಾಡಿದ ಅವರು, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರ ಅಭಿವೃದ್ಧಿಗೆ ಯುವಕರು ಮುಂದಾಗಬೇಕಿದೆ ಎಂದರು. ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಮಮತಾ, ಲಯನ್ಸ್ ಸಂಸ್ಥೆ ಖಜಾಂಚಿ ಸಿದ್ದಪ್ಪ ಗುಜ್ಜರಿ, ಪದಾಧಿಕಾರಿಗಳಾದ ಡಿ.ಅರ್.ಕೀರ್ತಿರಾಜ್, ಎ.ಎಸ್.ರೇಣುಕಯ್ಯ, ಮುಖ್ಯ ಶಿಕ್ಷಕ ಬಸವರಾಜು, ಶಿಕ್ಷಕರು ಇದ್ದರು.