ಚನ್ನಗಿರಿ: ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ರೈತರ ದೂರಿನ ಹಿನ್ನೆಲೆಯಲ್ಲಿ ಶಾಸಕ ಬಸವರಾಜ್ ಶಿವಗಂಗಾ ಮಂಗಳವಾರ ಕೃಷಿ ಇಲಾಖೆಗೆ ದಿಢೀರ್ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ರೈತರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರೈತರು ಕೃಷಿ ಇಲಾಖೆಗೆ ಭೇಟಿ ನೀಡಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಕುರಿತು ಹಲವಾರು ರೈತರು ನನಗೆ ದೂರು ನೀಡುತ್ತಿದ್ದಾರೆ. ಇನ್ಮುಂದೆ ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗುಸಲಾಗುವುದೆಂದು ಎಚ್ಚರಿಸಿದರು.
ರೈತರು ತಡಪಾಲು ಕೇಳಿದರೆ ಇಲ್ಲವೆನ್ನುತ್ತಿದ್ದೀರಿ. ಆದರೆ, ಇಲ್ಲಿ ಸಾಕಷ್ಟು ತಡಪಾಲುಗಳಿವೆ. ಇನ್ಮುಂದೆ ಯಾವುದೇ ರೈತರು ತಡಪಾಲು ಕೇಳಿದರೆ ಬೇಕಾದ ದಾಖಲೆ ಪಡೆದು ತಕ್ಷಣ ನೀಡಿ. ಬೇಡಿಕೆ ಹೆಚ್ಚಾದರೆ ಮತ್ತೆ ತರಿಸಿಕೊಡಿ ಎಂದು ಹೇಳಿದರು.
ಕೃಷಿ ಇಲಾಖೆಯಲ್ಲಿ ಒಟ್ಟು 32 ವಿವಿಧ ಹುದ್ದೆಗಳು ಖಾಲಿ ಇದ್ದು, ಈ ಕುರಿತು ಸಂಬಂಧಿಸಿದ ಇಲಾಖೆ ಸಚಿವರ ಬಳಿ ಮಾತನಾಡಿ ಖಾಲಿ ಇರುವಂತಹ ಹುದ್ದೆಗಳ ಭರ್ತಿ ಮಾಡಿಸುವೆ ಎಂದರು.
ತಾಲೂಕಿನಲ್ಲಿ ಮುಂಗಾರು ಸರಿಯಾದ ಸಮಯದಲ್ಲಿ ಬಾರದೆ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನಷ್ಟವಾಗಿದೆ. ಬರಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆ ಅಧಿಕಾರಿಗಳಿಗೆ ವರದಿಯನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ಕಳುಹಿಸುವಂತೆ ತಿಳಿಸಿದ್ದೇನೆ. ಸರ್ಕಾರದಿಂದ ಸಿಗುವಂತಹ ಪರಿಹಾರವನ್ನು ರೈತರಿಗೆ ಪ್ರಮಾಣಿಕವಾಗಿ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ಕೃಷಿ ಅಧಿಕಾರಿ ಮೆಹತಾಬ್ ಅಲಿ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಹರೋನಹಳ್ಳಿ ವಿಜಯಕುಮಾರ್ ಗೌಡ್ರು, ಮೋಹನ್, ಮಧುಕುಮಾರ್ ಇದ್ದರು.