ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಹೊಸಕೋಟೆ
ಹೊಸಕೋಟೆ ತಾಲೂಕಿನ ಕಸಬಾ ಸೇರಿ ನಾಲ್ಕೂ ಹೋಬಳಿ ವ್ಯಾಪ್ತಿಯ 38 ಕೆರೆಗಳಿಗೆ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವುದು, ಪ್ರಗತಿಯಲ್ಲಿರುವ ತಾಯಿ ಮತ್ತು ಮಗು ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡುವುದು, ನಗರಕ್ಕೆ ಕುಡಿಯಲು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವುದು, ಎಲಿವೇಟೆಡ್ ರಸ್ತೆ ನಿರ್ಮಾಣದ ಮೂಲಕ ನಗರದಲ್ಲಿನ ವಾಹನ ದಟ್ಟಣೆ ನಿಯಂತ್ರಿಸುವುದು, ತಾಲೂಕಿನಲ್ಲಿ ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳಿಗಾಗಿ ವೆಂಡಿಂಗ್ ಜೋನ್ ನಿರ್ಮಾಣ, ಪ್ರವಾಸೋದ್ಯಮ ತಾಣವಾಗಿ ಅಮಾನಿಕೆರೆ ಅಭಿವೃದ್ಧಿ, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಜಿಲ್ಲೆಯ ನಾಲ್ಕೂ ಹೋಬಳಿಯಲ್ಲಿ ಮಾದರಿ ಸರ್ಕಾರಿ ಶಾಲೆಗಳ ನಿರ್ಮಾಣವೂ ಸೇರಿ ಹಲವು ಯೋಜನೆಗಳಿಗೆ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಉಪನಗರದ ಸ್ಪರ್ಶ ನೀಡಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ…
ವಿಜಯವಾಣಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಶಾಸಕ ಶರತ್‌ಬಚ್ಚೇಗೌಡ ಹೊಸಕೋಟೆ ತಾಲೂಕಿನ ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟರು. ಈಗಾಗಲೇ ಸಿದ್ಧಪಡಿಸಿರುವ ನೀಲಿನಕ್ಷೆಗಳ ಮಾಹಿತಿ ಹಂಚಿಕೊಂಡರು. ಎರಡನೇ ಬಾರಿ ಶಾಸಕರಾಗಿ ತಾಲೂಕನ್ನು ಪ್ರತಿನಿಧಿಸುತ್ತಿದ್ದು, ಸಮಗ್ರ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ಜಾರಿಗೆ ತರಲು ಉತ್ಸುಕನಾಗಿದ್ದು, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ, ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಅನುದಾನ ಕೊರತೆ ಎದುರಿಸಿದ್ದ ಬಗ್ಗೆ ಬೇಸರ ತೋಡಿಕೊಂಡರು. ಆದರೆ ಈ ಬಾರಿ ನಮ್ಮದೇ ಸರ್ಕಾರ ಇರುವುದರಿಂದ ಅಂದುಕೊಂಡ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಅನುದಾನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ತಾಲೂಕಿನ 38 ಕೆರೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ಹರಿಸುವ ಯೋಜನೆ ವೇಗ ಕಳೆದುಕೊಂಡಿತ್ತು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನಸೆಳೆದು ಯೋಜನೆಗೆ ವೇಗ ದೊರಕಿಸಿಕೊಡಲಾಗಿದೆ. ಕಸಬಾ, ಜಡಿಗೇನಹಳ್ಳಿ ಹಾಗೂ ಅನುಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮೊದಲ ಹಂತ ಹಾಗೂ ಸೂಲಿಬೆಲೆ, ನಂದಗುಡಿ ಹೋಬಳಿಗಳಿಗೆ ಎರಡನೇ ಹಂತದಲ್ಲಿ ನೀರು ಹರಿಸುವ ಯೋಜನೆ ಚಾಲನೆಯಲ್ಲಿದ್ದು, ತಾಲೂಕಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಸಲಿದೆ, ಕೃಷಿ ಚಟುವಟಿಕೆಗಳಿಗೆ ಈ ಯೋಜನೆ ಶಾಶ್ವತ ಪರಿಹಾರ ಕಲ್ಪಿಸಲಿದೆ.
ಒಂದೂವರೆ ವರ್ಷದಲ್ಲಿ ಕಾವೇರಿ ಹೊಸಕೋಟೆ ನಗರಕ್ಕೆ ಕುಡಿಯಲು ಕಾವೇರಿ ನೀರು ದೊರಕಿಸಿಕೊಡಬೇಕು ಎಂಬುದು ನನ್ನ ಹೆಬ್ಬಯಕೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ. ಮಹದೇವಪುರದವರೆಗೆ ಇರುವ ಕಾವೇರಿ ಸಂಪರ್ಕವನ್ನು ನಗರಕ್ಕೆ ವಿಸ್ತರಣೆ ಮಾಡುವ ಸಂಬಂಧ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದೆ. ಒಂದೂವರೆ ವರ್ಷದೊಳಗೆ ಈ ಯೋಜನೆ ಟೇಕ್ಾ ಆಗಬೇಕೆಂಬ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ.
ಎಲಿವೇಟೆಡ್ ರಸ್ತೆ, ರಿಂಗ್ ರಸ್ತೆ: ಹೊಸಕೋಟೆ ನಗರದಲ್ಲಿ ವಿಪರೀತ ವಾಹನದಟ್ಟಣೆ ಇರುತ್ತದೆ. ದೊಡ್ಡ ರಸ್ತೆಗಳು ಇಲ್ಲದ ಕಾರಣ ಜಂಕ್ಷನ್‌ಗಳಲ್ಲಿ ವಾಹನ ಸವಾರರು ಪರದಾಡುವಂತಾಗುತ್ತಿದೆ. ಈ ಭಾಗದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣದ ಮೂಲಕ ಪರಿಹಾರ ಕಲ್ಪಿಸುವ ಚಿಂತನೆ ಇದೆ. ಹಾಗೆಯೇ ನಗರಕ್ಕೆ ರಿಂಗ್ ರಸ್ತೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯೂ ಇದ್ದು ಮುಂದಿನ ದಿನಗಳಲ್ಲಿ ಇದೂ ಕಾರ್ಯರೂಪಕ್ಕೆ ಬರಲಿದೆ. ಅದೇ ರೀತಿ ನಗರದ ಮೂರು ಕಡೆಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಸ್ಕೈವಾಕ್ ನಿರ್ಮಾಣವಾಗಲಿದೆ.
ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪವಿಲ್ಲ: ತಾಲೂಕಿನಲ್ಲಿ ಯಾವುದೇ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಅವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂಬುದು ನನ್ನ ಮುಖ್ಯ ಧೋರಣೆ. ಈ ವಿಷಯದಲ್ಲಿ ಯಾವುದೇ ಅಧಿಕಾರಿ ಕರ್ತವ್ಯಲೋಪ ಎಸಗುವುದು ಕಂಡುಬಂದರೆ ನಾನು ಸುಮ್ಮನಿರಲ್ಲ. ಅಧಿಕಾರಿಗಳಿಲ್ಲದೆ ಯಾವುದೇ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಅವರ ವೈಯಕ್ತಿಕ ವಿಷಯ ನನಗೆ ಬೇಕಿಲ್ಲ. ತಾಲೂಕಿನ ಅಭಿವೃದ್ಧಿಗೆ ದುಡಿಯಬೇಕು ಎಂದು ಬಯಸುತ್ತೇನೆ.
ಮಿನಿ ಟೌನ್ ನಿರ್ಮಾಣದ ಕನಸು ಹೊಸಕೋಟೆಗೆ ಉತ್ತಮ ಭವಿಷ್ಯವಿದೆ. ಸಾಕಷ್ಟು ಸ್ಥಳಾವಕಾಶವಿರುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡುವ ಹಲವು ವಿಷಯಗಳಿಗೆ ಅಪಾರ ಅವಕಾಶವಿದೆ. ಈಗಾಗಲೇ ಕೆಎಚ್‌ಬಿಯಿಂದ ಎರಡೂವರೆ ಸಾವಿರ ಎಕರೆ ಭೂಮಿ ಬೇಕೆಂಬ ಬೇಡಿಕೆ ಬಂದಿದೆ. ಇಲ್ಲೊಂದು ಟೌನ್‌ಶಿಪ್ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಇಟ್ಟಿರುವೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ನ್ಯೂಹೊಸಕೋಟೆಯೊಂದು ಜನ್ಮತಾಳಲಿದೆ.
ಉದ್ಯೋಗ ಸೃಷ್ಟಿ ಪ್ರಮುಖ ಧ್ಯೇಯ: ಶಾಲಾ-ಕಾಲೇಜುಗಳ ಅಭಿವೃದ್ಧಿ, ಶಿಕ್ಷಣದ ಪ್ರಗತಿಗೆ ಆದ್ಯತೆ ನೀಡಿದಷ್ಟೇ ಮುಖ್ಯವಾಗಿ ಉದ್ಯೋಗಾವಕಾಶಗಳಿಗೂ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಈ ಹಿಂದಿನಿಂದಲೂ ತಾಲೂಕಿನಲ್ಲಿ ನೂರಾರು ಕಂಪನಿಗಳ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗಿದೆ. ಇನ್ನು ಮುಂದೆ ಮತ್ತಷ್ಟು ದೊಡ್ಡಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ತಾಲೂಕು ವ್ಯಾಪ್ತಿಯಲ್ಲಿರುವ ಅಷ್ಟೂ ಕಂಪನಿಗಳ ಎಚ್‌ಆರ್‌ಗಳನ್ನು ಆಹ್ವಾನಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ವಾತಾವರಣ ಸೃಷ್ಟಿಸುವುದು ನನ್ನ ಗುರಿ.
ಮಾದಕ ವಸ್ತು ಜಾಲ ಕಿತ್ತೊಗೆಯಲು ಪಣ ನೆರೆಯ ಆಂಧ್ರ ಮೂಲದಿಂದ ಗಾಂಜಾ, ಸಿಂಥೆಟಿಕ್ ಡ್ರಗ್ಸ್ ತಾಲೂಕು ಪ್ರವೇಶಿಸುತ್ತಿದ್ದು, ಭೂಗತವಾಗಿ ಯುವಸಮುದಾಯಕ್ಕೆ ರವಾನೆಯಾಗುತ್ತಿದೆ. ಈ ಜಾಲವನ್ನು ಬುಡಸಹಿತ ಕಿತ್ತೊಗೆಯುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದೇನೆ. ಪೊಲೀಸ್ ಇಲಾಖೆ ಸಹಯೋಗದಲ್ಲಿ ವಿಶೇಷ ಕಾರ್ಯಚರಣೆ ಮೂಲಕ ಈ ದಂಧೆಗೆ ಬ್ರೇಕ್ ಹಾಕಲು ಪ್ರಯತ್ನ ನಡೆಯುತ್ತಿದೆ.