ಜಿಲ್ಲೆ

1.45 ಟಿಎಂಸಿ ನೀರು ಕಡೂರಿಗೆ ಬಳಕೆಯಾಗಲಿ

Chikkamagaluru

ಕಡೂರು: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿರುವ 1,281.80 ಕೋಟಿ ರೂ. ವೆಚ್ಚದ ಭದ್ರಾ ಉಪಕಣಿವೆ ಶಾಶ್ವತ ನೀರಾವರಿ ಯೋಜನೆಯಲ್ಲಿ ಕಡೂರು ಕ್ಷೇತ್ರಕ್ಕೆ ಮೀಸಲಾಗಿರುವ 1.45 ಟಿಎಂಸಿ ನೀರಿನ ಲಭ್ಯತೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಶಾಸಕ ಬೆಳ್ಳಿ ಪ್ರಕಾಶ್ ಚಿಂತನೆ ನಡೆಸಬೇಕು ಎಂದು ಜಿಪಂ ಸದಸ್ಯ ಶರತ್​ಕೃಷ್ಣಮೂರ್ತಿ ಹೇಳಿದರು.

ಈ ಹಿಂದೆ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಅವರು ಹೆಬ್ಬೆ ಯೋಜನೆಯಿಂದ ಮದಗದಕೆರೆಗೆ ನೀರು ಹರಿಸುವ ಕನಸು ಕಂಡಿದ್ದರು. ಅದೇ ಯೋಜನೆಯಲ್ಲಿ ಕಡೂರಿಗೆ 1.45 ಟಿಎಂಸಿ ನೀರನ್ನು ಮೀಸಲಿಡಲಾಗಿತ್ತು. ಈ ಯೋಜನೆಯಲ್ಲಿ ಕಡೂರಿಗೆ ಅಳವಡಿಕೆಯಾಗಿರುವ 1.45 ಟಿಎಂಸಿ ನೀರಿನಲ್ಲಿ ಅರ್ಧಕ್ಕಿಂತ ಕಡಿಮೆ(700 ಎಂಸಿಎಫ್​ಟಿ) ನೀರು ದೊರೆಯುತ್ತದೆ. ಉಳಿದ ನೀರು ತರೀಕೆರೆ ಮತ್ತು ಚಿಕ್ಕಮಗಳೂರು, ಅರಸೀಕೆರೆ ಭಾಗದ ಕೆರೆಗಳಿಗೆ ಹೋಗುತ್ತದೆ. ನಮ್ಮ ಹಕ್ಕಿನ ನೀರು ನಮ್ಮ ಕೈಜಾರಿಹೋಗುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಕಡೂರು ವಿಧಾನಸಭಾ ಕ್ಷೇತ್ರದ 150 ಸಣ್ಣ ಮತ್ತು ದೊಡ್ಡ ಕೆರೆಗಳನ್ನು ಕೈ ಬಿಟ್ಟು 80ರಿಂದ 90 ಕೆರೆಗಳಿಗೆ ಮಾತ್ರ ನೀರು ಹರಿಸುವ ಬಗ್ಗೆ ಯೋಜನೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚೆಯಾಗಬೇಕು. ಯೋಜನೆ ಆರಂಭವಾಗುವ ಮುನ್ನ ಕಡೂರು ಕ್ಷೇತ್ರದ ಹಕ್ಕಿನ ನೀರನ್ನು ಉಳಿಸಿಕೊಳ್ಳುವ ಬಗ್ಗೆ ಶಾಸಕರು ಕಾರ್ಯೋನ್ಮುಖರಾಗಬೇಕು. ಯೋಜನೆ ಬಗ್ಗೆ ನಮಗೆ ಅಪಸ್ವರವಿಲ್ಲ. ವ್ಯವಸ್ಥಿತವಾಗಿ ನಮ್ಮ ಹಕ್ಕಿನ ನೀರನ್ನು ನಮಗೆ ಉಳಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.