ಕಾರವಾರ:ಪಾಲಕರ ಅರಿವಿಗೆ ಬಾರದೇ ಸರ್ಕಾರದ ಅನುದಾನ ತಿರಸ್ಕರಿಸಿದ ಇಲ್ಲಿನ ಸೇಂಟ್ ಮೈಕಲ್ ಹೈಸ್ಕೂಲ್ ಆಡಳಿತ ಮಂಡಳಿಯು ಈ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಅಗತ್ಯ ವಿದ್ಯಾರ್ಥಿಗಳಿಗೆ ಬಿಸಿಯೂಟ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಶಾಸಕ ಸತೀಶ ಸೈಲ್ ಸೂಚನೆ ನೀಡಿದರು.
ಶಾಲೆಯಲ್ಲಿ ಪಾಲಕರ ಹಾಗೂ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಜಂಟಿ ಸಭೆ ನಡೆಸಿ ಅವರು ಮಾತನಾಡಿದರು. ಶಾಲೆ ಅನುದಾನಕ್ಕೆ ಒಳಪಟ್ಟಿದ್ದರೂ ಪ್ರಾಥಮಿಕ ಹಂತದಲ್ಲಿ ಒಬ್ಬ ಶಿಕ್ಷಕಿ ಹಾಗೂ ಪ್ರೌಢ ಹಂತದಲ್ಲಿ ಒಬ್ಬ ಡಿ ದರ್ಜೆ ನೌಕರ ಮಾತ್ರ ಸರ್ಕಾರದ ವೇತನ ಪಡೆಯುತ್ತಿದ್ದಾರೆ. ಆದರೆ, 800 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಉಳಿದ ಎಲ್ಲ ಶಿಕ್ಷಕರಿಗೆ ಆಡಳಿತ ಮಂಡಳಿ ವೇತನ ನೀಡಬೇಕಿತ್ತು. ಇದರಿಂದ ಆಡಳಿತ ಮಂಡಳಿಯು ವೇತನಾನುದಾನ ಬೇಡ ಎಂದು 2022 ಜುಲೈನಲ್ಲಿ ಅರ್ಜಿ ಸಲ್ಲಿಸಿತ್ತು.
ಆದರೆ, ಸರ್ಕಾರ ಈ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ಅನುದಾನ ರದ್ದು ಮಾಡಿ ಆದೇಶ ಹೊರಡಿಸಿದೆ. ಅನುದಾನ ರಹಿತ ಶಾಲೆಯಾಗಿದ್ದರಿಂದ ಸರ್ಕಾರದ ಸೌಲಭ್ಯ ತಮಗೆ ದೊರೆಯುತ್ತಿಲ್ಲ ಎಂದು ಶಾಲೆಯ ವಿರುದ್ಧ ಪಾಲಕರು ಈ ಹಿಂದೆ ಎರಡು ಬಾರಿ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ಹಾಗಾಗಿ ಸಭೆ ನಡೆಸಲಾಗುತ್ತಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಅಗತ್ಯವಿದ್ದವರು ಪತ್ರ ಬರೆದುಕೊಡಿ. ಶಾಲಾ ಆಡಳಿತ ಮಂಡಳಿಗೆ ನಾನು ಸಹಕಾರ ನೀಡುವೆ. ಈ ಶೈಕ್ಷಣಿಕ ವರ್ಷ ಮುಕ್ತಾಯವಾಗುವವರೆಗೆ ಮಾತ್ರ ಬಿಡಿಯೂಟ ನೀಡಲಿ ಎಂದರು.
ಇದನ್ನೂ ಓದಿ:ಮೈಸೂರಿನಿಂದ ಮುರ್ಡೇಶ್ವರಕ್ಕಿನ್ನು ರೈಲು
ಎನ್‌ಸಿಸಿ ತರಬೇತಿ ಇದುವರೆಗೆ ಉಚಿತವಾಗಿ ನಡೆಯುತ್ತಿದ್ದು, ಈಗ 8 ಸಾವಿರ ಪಡೆಯಲಾಗುತ್ತಿದೆ ಎಂಬ ದೂರಿದೆ. ಈ ವರ್ಷ ಅಂತ್ಯದವರೆಗೆ ಶಾಲಾ ಆಡಳಿತ ಮಂಡಳಿ ಎನ್‌ಸಿಸಿ ಶುಲ್ಕ ಪಡೆಯಬಾರದು ಎಂದು ಸೂಚಿಸಿದರು.
ಶಾಲೆಯನ್ನು ಮರು ಅನುದಾನಕ್ಕೆ ಒಳಪಡಿಸಬೇಕು ಎಂದು ಪಾಲಕರು ಒತ್ತಾಯಿಸಿ ಪತ್ರವೊಂದನ್ನು ಬರೆಯಿರಿ. ಅದನ್ನು ಬಿಇಒ ಅವರ ಮೂಲಕ ಸರ್ಕಾರಕ್ಕೆ ಕಳಿಸಲಾಗುವುದು ಎಂದರು.
ಬಿಇಒ ಚಂದ್ರಹಾಸ ರಾಯ್ಕರ್, ಶಾಲೆಯ ಪ್ರಾಂಶುಪಾಲೆ ಕ್ರಿಸ್ಟಿನಾ ಜೋಸೆಫ್, ಆಡಳಿತ ಮಂಡಳಿ ಪ್ರಮುಖರಾದ ಲಿಯೋ ಲೂಯೀಸ್, ಕ್ಯಾಪ್ಟನ್ ವೆಗಾಸ್ ಇತರರು ಉಪಸ್ಥಿತರಿದ್ದರು.