ಜಿಲ್ಲೆ

ಶಾಸಕ ಎಸ್.ಭೀಮಾನಾಯ್ಕರನ್ನು ಪಕ್ಷದಿಂದ ಉಚ್ಚಾಟಿಸಲಿ, ಮಾಜಿ ಶಾಸಕ ಸಿರಾಜ್ ಶೇಕ್ ಆಗ್ರಹ

Ballari

ಮರಿಯಮ್ಮನಹಳ್ಳಿ: ಸಾಹಿತ್ಯ, ಶಿಕ್ಷಣ ಪ್ರೇಮಿಯಾಗಿದ್ದ ಎಂ.ವೈ.ಘೋರ್ಪಡೆ ಬಗ್ಗೆ ಶಾಸಕ ಎಸ್.ಭೀಮಾನಾಯ್ಕಗೆ ಮಾತನಾಡುವ ಯೋಗ್ಯತೆ ಇಲ್ಲ. ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮಾಜಿ ಶಾಸಕ ಸಿರಾಜ್ ಶೇಕ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಂ.ವೈ.ಘೋರ್ಪಡೆ ಸತತ ಗೆಲುವು ಸಾಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಶಾಸಕ ಭೀಮಾನಾಯ್ಕ ಊರಿನವರಾದ ಉಮಾಪತಿ ನಾಯ್ಕ, ಎಂ.ವೈ.ಘೋರ್ಪಡೆ ಅವರ ಒಡನಾಡಿಗಳಾಗಿದ್ದರು. ಸ್ವಾಮಿನಾಯ್ಕಾ ರಾಜಕೀಯ ಬಲಗೈಯಾಗಿದ್ದರು. ಭೀಮಾನಾಯ್ಕ ಅವರ ತಂದೆ ತೋಟಾನಾಯ್ಕ ಎಂ.ವೈ. ಘೋರ್ಪಡೆ ಆಶ್ರಯದಲ್ಲಿ ಬೆಳೆದಿದ್ದರು. ಅವರ ತಾಯಿಗೂ ತಾಪಂ ಟಿಕೆಟ್ ಒದಗಿಸಿದ್ದರು.

ಆದರೆ, ಶಾಸಕ ಭೀಮಾನಾಯ್ಕಗೆ ಪಕ್ಷ, ತತ್ವ, ಸಿದ್ಧಾಂತಗಳಿಲ್ಲ. ಇಂಥವರನ್ನು ಪಕ್ಷಕ್ಕೆ ಕರೆ ತಂದ ಸಂತೋಷ್ ಲಾಡ್ ಸೇರಿ ಜಿಲ್ಲೆಯ ಮುಖಂಡರು ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರದಲ್ಲಿ ತಮ್ಮ ಮಾತು ಕೇಳದವರ ವಿರುದ್ಧ ಭೀಮಾನಾಯ್ಕ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಈ ಹಿಂದೆ ಮಾಜಿ ಶಾಸಕ ನೇಮಿರಾಜ್ ನಾಯ್ಕ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ನಂತರ ಮೌನವಾಗಿದ್ದರು. ಕೂಡಲೇ ಶಾಸಕ ಎಸ್.ಭೀಮಾನಾಯ್ಕ, ಅವರ ಬೆಂಬಲಕ್ಕೆ ನಿಂತಿರುವ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಬೇಕು. ನಿರ್ಲಕ್ಷವಹಿಸಿದರೆ, ಜಿಲ್ಲಾದ್ಯಂತ ಘೋರ್ಪಡೆ ಅಭಿಮಾನಿಗಳಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ರಾಥೋಡ್ ಇತರರಿದ್ದರು.