ಜಿಲ್ಲೆ

ಶೀಘ್ರ ಮಿನಿ ವಿಧಾನಸೌಧ ನಿರ್ಮಿಸಿ ; ಲೋಕೋಪಯೋಗಿ ಇಲಾಖೆ ಇಇಗೆ ಶಾಸಕಿ ರೂಪಕಲಾ ಸೂಚನೆ

Kolar

ಕೋಲಾರ : ಕೆಜಿಎಫ್ ಅನ್ನು ತಾಲೂಕಾಗಿ ಘೋಷಿಸಿ ಎರಡು ವರ್ಷಗಳಾದರೂ ಜನರ ಅನುಕೂಲಕ್ಕಾಗಿ ಮಿನಿ ವಿಧಾನಸೌಧ ನಿರ್ಮಿಸುವುದಕ್ಕೆ ಮೀನ ಮೇಷ ಎಣಿಸಲಾಗುತ್ತಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

ಮಿನಿ ವಿಧಾನಸೌಧ ನಿರ್ಮಾಣ ಸೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಶನಿವಾರ ಲೋಕೋಪಯೋಗಿ ಇಲಾಖೆ ಇಇ ಆರ್.ಚಂದ್ರಶೇಖರ್ ಅವರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಕೆಜಿಎಫ್ ಅನ್ನು ಹೊಸ ತಾಲೂಕಾಗಿ ಘೋಷಿಸಲಾಯಿತು. ತಾಲೂಕು ಕಚೇರಿಗೆ ತಕ್ಷಣಕ್ಕೆ ಜಾಗದ ಸಮಸ್ಯೆ ಇದ್ದುದ್ದರಿಂದ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಕಚೇರಿ ತೆರೆಯಲಾಗಿದೆ. ಇಲ್ಲಿ ಎಲ್ಲ ವಿಭಾಗಗಳ ನಿರ್ವಹಣೆಗೆ ತೊಂದರೆ ಆಗುತ್ತಿರುವುದರಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅದಷ್ಟು ಬೇಗನೆ ಚಾಲನೆ ನೀಡಬೇಕಾಗಿದೆ ಎಂದರು.

ಹಾಲಿ ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ಗಡಿ ಭಾಗದ ಜನರಿಗೆ ಅನಾನುಕೂಲವಾಗುತ್ತಿದೆ, ಸರ್ಕಾರದ ಮೇಲೆ ಒತ್ತಡ ತಂದು 10 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 2020ರ ಸೆ.20ರಂದು ಕಂದಾಯ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದರಿಂದ ಕೂಡಲೆ ಟೆಂಡರ್ ಪ್ರಕ್ರಿಯೆಗೆ ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಪಿಡಬ್ಲುೃಡಿ ಇಇ ಆರ್.ಚಂದ್ರಶೇಖರ್‌ಗೆ ಸೂಚಿಸಿರುವೆ ಎಂದರು.

ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕೆಜಿಎಫ್ ನಗರದ ಹೃದಯ ಭಾಗದಲ್ಲಿರುವ ನ್ಯಾಯಾಲಯದ ಪಕ್ಕದಲ್ಲಿ ಸರ್ಕಾರಕ್ಕೆ ಸೇರಿದ 4 ಎಕರೆ ಭೂಮಿ ಮಂಜೂರಾಗಿದೆ. ಇಲ್ಲಿ ತಾಲೂಕು ಕಚೇರಿ ನಿರ್ಮಾನವಾಗುವುದರಿಂದ ಪ್ರತಿಯೊಬ್ಬರಿಗೂ ಉಪಯೋಗಲಿದೆ ಎಂದು ತಿಳಿಸಿದರು.

ಪ್ರವಾಸಿ ಮಂದಿರಕ್ಕೆ ಪ್ರಸ್ತಾವನೆ: ಕೆಜಿಎಫ್ ನಗರದಲ್ಲಿರುವ ಪ್ರವಾಸಿ ಮಂದಿರ ಹಳೆಯದಾಗಿದೆ, ಮೂಲ ಸೌಕರ್ಯಗಳ ಕೊರತೆಯಿದ್ದು, ಕೆಜಿಎಫ್ ಮೂಲಕ ತಿರುಪತಿ, ಚೆನ್ನೈ ಇನ್ನಿತರ ಸ್ಥಳಕ್ಕೆ ಹೋಗುವ ಅತಿಥಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ ಪ್ರವಾಸಿ ಮಂದಿರ ಬೇಕಾಗಿರುವುದರಿಂದ ಸರ್ಕಾರಕ್ಕೆ 5 ಕೋಟಿ ರೂ.ಗಳ ಅಂದಾಜುಪಟ್ಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಿ: ಕೆಜಿಎಫ್ ತಾಲೂಕಿನಲ್ಲಿ ಪಿಡಬ್ಲುೃಡಿಯ ಉಪವಿಭಾಗ ತೆರೆಯುವುದಕ್ಕೂ ಮನವಿ ಮಡಲಾಗಿದೆ, ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕಾಲ ಕಾಲಕ್ಕೆ ನಡೆಸಿ ಲೋಪಕ್ಕೆ ಅವಕಾಶವಿಲ್ಲದಂತೆ ಕೆಲಸ ಮುಗಿಸಲು ತಿಳಿಸಿರುವೆ, ಕೆಜಿಎಫ್‌ನ ಫೈವ್ ಲೈಟ್ಸ್‌ನಿಂದ ಕೆಂಪಾಪುರ ವೃತ್ತದವರೆಗೆ ಹಾಗೂ ಉರಿಗಾಂನಿಂದ ಅಂಡರ್‌ಸನ್ ಪೇಟೆವರೆಗಿನ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ಹಾಗೂ ಚರಂಡಿ ನಿರ್ಮಾಣವಿಲ್ಲದೆ ರಸ್ತೆ ಕಾಮಗಾರಿ ಕೈಗೊಂಡರೆ ಪ್ರಯೋಜನವಿಲ್ಲ ಎಂದು ಎಚ್ಚರಿಸಿದರು.

ಚರಂಡಿಗಳ ನಿರ್ಮಾಣಕ್ಕೆ ಅನುದಾನ ಕೊರತೆಯಿದ್ದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಹಣ ಕೊಡಿಸುವೆ, ವಿಧಾನಮಂಡಲದ ಅಧಿವೇಶನ ಸಮಯದಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು 2 ಕೋಟಿ ರೂ.ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡಿದ್ದು, ಈ ಹಣದಲ್ಲಿ 20 ಲಕ್ಷ ರೂ.ಗಳನ್ನು ಚರಂಡಿ ನಿರ್ಮಾಣಕ್ಕೆ ನೀಡುವುದಾಗಿ ತಿಳಿಸಿದರು.

ಮಿನಿ ವಿಧಾನಸೌಧ ನಿರ್ಮಾಣದ ಟೆಂಡರ್ ಕರೆಯಲು ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಬಹುದು. ಈ ಬಗ್ಗೆ ಡಿಸಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು, ಉಳಿದಂತೆ ಚಾಲ್ತಿಯಲ್ಲಿರುವ ರಸ್ತೆ ಕಾಮಗಾರಿಗಳು ಮುಂದುವರೆಯಲಿವೆ. ಆರ್.ಚಂದ್ರಶೇಖರ್, ಇಇ,ಲೋಕೋಪಯೋಗಿ ಇಲಾಖೆ, ಕೋಲಾರ