ಜಿಲ್ಲೆ

ದೀಪಾವಳಿಗೆ ಅಕ್ಕಿ ವಿತರಿಸಲು ಶಾಸಕ ಟೆಂಗಿನಕಾಯಿ ಆಗ್ರಹ

ಹುಬ್ಬಳ್ಳಿ: ಸರ್ವರ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡಲು ಹೇರಲು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಹುಬ್ಬಳ್ಳಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು, ನಗರದಲ್ಲಿ ಭಾನುವಾರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಕೇಂದ್ರ ಸರ್ಕಾರವು ಈಗಾಗಲೇ ಬಡ ಜನರಿಗೆ ಅಕ್ಕಿ ವಿತರಿಸುತ್ತಿದೆ. ಎನ್‌ಐಸಿ ಸರ್ವರ್ ತೆಗೆದು ರಾಜ್ಯ ಸರ್ಕಾರವು ತನ್ನದೇ ಆದ ಸರ್ವರ್ ಹಾಕಿಕೊಂಡಿದೆ. ಇದು ಮೊಂಡುತನದ ಪರಮಾವಧಿ. ದೀಪಾವಳಿ ಸಂಭ್ರಮದಲ್ಲಿರುವ ಬಡವರಿಗೆ ರಾಜ್ಯ ಸರ್ಕಾರ ಅಕ್ಕಿ ಕೊಡದೇ ವಂಚಿಸುತ್ತಿದೆ ಎಂದು ದೂರಿದರು.
ನಂತರ ಅಧಿಕಾರಿಗಳೊಂದಿಗೆ ಮಾತನಾಡಿ, ಚೆಕ್‌ಲಿಸ್ಟ್ ಪ್ರಕಾರ ಅಕ್ಕಿ ವಿತರಿಸಬೇಕು. ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ಸುರೇಶ ಕೊರ್ಲಹಳ್ಳಿ, ಮುತ್ತುಗೌಡ ಪಾಟೀಲ, ಪ್ರಕಾಶ ಉಗುರಗೋಳ, ದಯಾನಂದ ಸಕ್ರಿ, ರವಿ ಅಣ್ಣಿಗೇರಿ, ಶಿವಾಜಿ ದಳವಿ ಇತರರು ಉಪಸ್ಥಿತರಿದ್ದರು.