ಹೊನ್ನಾಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ರೇಣುಕಾಚಾರ್ಯ ಹಾಗೂ ಅವರ ಕುಟುಂಬಸ್ಥರು ಚಂದ್ರಶೇಖರ್ ಅಪಘಾತದಲ್ಲಿ ಮೃತಪಟ್ಟಿಲ್ಲ. ಇದೊಂದು ನಿಯೋಜಿತ ಕೊಲೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ವಹಿಸುವ ಸಾಧ್ಯತೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಂದು(ಬುಧವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊನ್ನಾಳಿ ಶಾಸಕ ರೇಣುಕಾಚಾರ್ಯರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಲಿದ್ದಾರೆ. ಈ ವೇಳೆ ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅ.30ರ ರಾತ್ರಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಹೊನ್ನಾಳಿ-ನ್ಯಾಮತಿ ರಸ್ತೆಯ ತುಂಗಾ ಮೇಲ್ದಂಡೆ ನಾಲೆಯಲ್ಲಿ 4 ದಿನದ ಬಳಿಕ ಅಂದರೆ ನ.4ರ ಸಂಜೆ ಶವವಾಗಿ ಪತ್ತೆಯಾಗಿದ್ದರು. ನಾಲೆ ಸೇತುವೆ ಮೇಲೆ ಕಾರಿನ ಬಿಡಿ ಭಾಗಗಳು ಕಾಣಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಾಗ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ 30 ಅಡಿ ಆಳದ ನಾಲೆಗೆ ಬಿದ್ದಿರುವುದು ಪತ್ತೆಯಾಗಿತ್ತು. ಕ್ರೇನ್ ಮೂಲಕ ಕಾರನ್ನು ಹೊರತೆಗೆದಾಗ ಕೊಳೆತ ಸ್ಥಿತಿಯಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿತ್ತು.
ಚಂದ್ರಶೇಖರ್ ಅವರದು ಆಕಸ್ಮಿಕ ಸಾವಲ್ಲ. ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿ ರೇಣುಕಾಚಾರ್ಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿದ್ದು, ಆಕಸ್ಮಿಕ ಅಪಘಾತವೋ, ಆತ್ಮಹತ್ಯೆಯೋ, ಕೊಲೆಯೋ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.