ಜಿಲ್ಲೆ

ಕ್ರೀಡಾಂಗಣಕ್ಕೆ ಶಾಸಕ ದಿಢೀರ್ ಭೇಟಿ: ಸಮಸ್ಯೆ ಹೇಳಿಕೊಂಡ ಕ್ರೀಡಾಪಟುಗಳು

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಶಾಸಕ ರವಿಕುಮಾರ್ ಗಣಿಗ ದಿಢೀರ್ ಭೇಟಿ ನೀಡಿದರು.

ಕ್ರೀಡಾಂಗಣದಲ್ಲಿ ವಾಯು ವಿಹಾರಿಗಳ ಜತೆ ಸಮಾಲೋಚನೆ ನಡೆಸಿ, ವಿವಿಧ ಕ್ರೀಡೆಗಳ ಅಭ್ಯಾಸ ನಡೆಸುತ್ತಿದ್ದ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳಿಂದ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು. ಪ್ರಮುಖವಾಗಿ ಹಾಸ್ಟೆಲ್‌ನಲ್ಲಿ ನೀಡಿರುವ ಊಟ, ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳಿಗೆ ಮಾಹಿತಿ ಕೊಡದೇ ಒಂದು ದಿನ ದಿಢೀರ್ ಭೇಟಿ ನೀಡುವುದಾಗಿ ತಿಳಿಸಿದರು. ಬಳಿಕ ಕ್ರೀಡಾಂಗಣದ ಜಿಮ್‌ಗೆ ಭೇಟಿ ನೀಡಿ ಸಲಕರಣೆ ಹಾಗೂ ಅಲ್ಲಿಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

ಇನ್ನು ವಾಯುವಿಹಾರಿಗಳು ಹಾಗೂ ಕ್ರೀಡಾಪಟುಗಳು ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಶಾಸಕರ ಗಮನಸೆಳೆದರು. ಪ್ರಮುಖವಾಗಿ ಮೈದಾನದಲ್ಲಿ ಮಣ್ಣು ತೆಗೆದಿರುವುದರಿಂದ ಸಮಸ್ಯೆಯಾಗುತ್ತಿದೆ. ನುಚ್ಚುಕಲ್ಲುಗಳು ಹೆಚ್ಚಾಗಿರುವುದರಿಂದ ವಾಕಿಂಗ್ ಹಾಗೂ ರನ್ನಿಂಗ್ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಹೊಸದಾಗಿ ಮಣ್ಣು ಹಾಕಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕ್ರೀಡಾಂಗಣಕ್ಕೆ ಹಲವು ಸೌಕರ್ಯ ಹಾಗೂ ಕೆಲವು ಅಭಿವೃದ್ಧಿ ಕೆಲಸಗಳ ಅಗತ್ಯ ಕಂಡುಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.