ಮಂಡ್ಯ: ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮಾರುಕಟ್ಟೆಯಲ್ಲಿ ಅರ್ಹರಿಗೆಲ್ಲ ಮಳಿಗೆ ಸಿಗಲಿದೆ. ಈ ವಿಷಯದಲ್ಲಿ ಆತಂಕಪಡುವುದು ಬೇಡ ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ಪೇಟೆಬೀದಿಯಲ್ಲಿ ಮಾರುಕಟ್ಟೆ ಕಾಮಗಾರಿ ಹಾಗೂ ಪ್ರಸ್ತುತ ನಡೆಯುತ್ತಿರುವ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರೊಂದಿಗೆ ಮಾತನಾಡಿದ ಅವರು, ಮಳಿಗೆ ಸಿಗುವ ಬಗ್ಗೆ ಕೆಲವರಿಗೆ ಗೊಂದಲವಿದೆ. ಆದರೆ ಅರ್ಹರಿಗೆ ಸೌಲಭ್ಯ ಸಿಗಲಿದೆ. ಇನ್ನು ಒಬ್ಬರೇ ಹೆಸರಿನಲ್ಲಿ ಎರಡು ಅಥವಾ ಮೂರು ಮಳಿಗೆ ಇರುವ ಮಾಹಿತಿ ಇದೆ. ಈ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಒಂದು ವೇಳೆ ಆ ರೀತಿ ಕಂಡುಬಂದರೆ ಹೆಚ್ಚುವರಿ ಮಳಿಗೆಯನ್ನು ರದ್ದುಪಡಿಸಿ ಬೇರೆಯವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಮಳೆ ಬಂದರೆ ಮಾರುಕಟ್ಟೆಯಲ್ಲಿ ನೀರು ನಿಲ್ಲುವುದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆಯೂ ಕ್ರಮ ವಹಿಸುವ ಮೂಲಕ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ ಅವರು, ನೂತನ ಮಾರುಕಟ್ಟೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿರಬೇಕು. ಪ್ರತಿ ಹಂತದಲ್ಲಿಯೂ ಪರಿಶೀಲನೆ ಮಾಡುತ್ತಿರಬೇಕು. ಪ್ರಮುಖವಾಗಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವಿಚಾರದಲ್ಲಿ ರಾಜೀ ಮಾತೇ ಇಲ್ಲ. ಅಂತೆಯೇ ತ್ವರಿತವಾಗಿ ಕೆಲಸ ಪೂರ್ಣಗೊಳಿಸಿ ಮಾರುಕಟ್ಟೆ ಪ್ರಾರಂಭಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಯುಕ್ತ ಮಂಜುನಾಥ್, ನಗರಸಭೆ ಸದಸ್ಯರಾದ ನಹೀಂ, ಮಂಜುಳಾ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರಿದ್ದರು.
ಹಾನಿಪ್ರದೇಶಕ್ಕೆ ಭೇಟಿ: ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಗರದ 34ನೇ ವಾರ್ಡ್ ಗುತ್ತಲು ಕಾಲನಿಗೆ ಶುಕ್ರವಾರ ಸಂಜೆ ಶಾಸಕ ರವಿಕುಮಾರ್ ಗಣಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದಾ ಸೂಜಿಯಮ್ಮ ಎಂಬುವರಿಗೆ ಸೇರಿದ ಮನೆಯ ಮೇಲ್ಚಾವಣಿಗೆ ಹಾನಿಯಾಗಿರುವ ಬಗ್ಗೆ ಪರಿಶೀಲಿಸಿದರು. ಮಹಿಳೆಗೆ ಆತ್ಮಸ್ಥೈರ್ಯ ತುಂಬುವುದರ ಜತೆಗೆ ಮೂಲಕ ವೈಯಕ್ತಿಕವಾಗಿ ಹಣ ಸಹಾಯ ಮಾಡಿದರು. ಅಂತೆಯೇ ಸರ್ಕಾರದ ಪರಿಹಾರವನ್ನು ಒದಗಿಸುವಂತೆ ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪೂರ್ಣಾನಂದ, ರಾಮಲಿಂಗೇಗೌಡ, ನಹೀಂ ಇತರರಿದ್ದರು.