ಜಿಲ್ಲೆ

ಸ್ಥಳದಲ್ಲೇ ಐದು ಲಕ್ಷ ರೂ ಘೋಷಣೆ: ವಿದ್ಯಾರ್ಥಿನಿ ಮನವಿಗೆ ಶಾಸಕ ರವಿಕುಮಾರ್ ಗಣಿಗ ಸ್ಪಂದನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡುವಂತೆ ವಿದ್ಯಾರ್ಥಿನಿ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ರವಿಕುಮಾರ್ ಗಣಿಗ, ಸ್ಥಳದಲ್ಲಿಯೇ ಐದು ಲಕ್ಷ ರೂ ಅನುದಾನವನ್ನು ಘೋಷಣೆ ಮಾಡಿದರು.

ವೀರಭದ್ರೇಶ್ವರ ಅಗ್ನಿ ಕೊಂಡೋತ್ಸವ ನಿಮಿತ್ತ ಗ್ರಾಮದಲ್ಲಿ ಮಂಗಳವಾರ ಸಂಜೆ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಹಲವು ವಿಷಯದ ಬಗ್ಗೆ ಚರ್ಚೆ ನಡೆಯಿತು. ಸಭೆ ನಡುವೆಯೇ ವೇದಿಕೆಗೆ ಆಗಮಿಸಿದ ಶಾಲೆಯ ವಿದ್ಯಾರ್ಥಿನಿ ನಮನಾ, ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡಿ. ಅಂತೆಯೇ ಶಾಲೆಯ ಕೊಠಡಿ ಶಿಥಿಲಗೊಂಡಿದೆ ಎಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕ ರವಿಕುಮಾರ್, ತುರ್ತಾಗಿ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಂತೆಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಲು ಶಾಸಕರ ಅನುದಾನದಲ್ಲಿ ಐದು ಲಕ್ಷ ರೂ ಮಂಜೂರು ಮಾಡುವುದಾಗಿ ತಿಳಿಸಿದರು.

ತಾಲೂಕು ಪಂಚಾಯಿತಿ ಇಒ ವೀಣಾ, ವೃತ್ತ ನಿರೀಕ್ಷಕ ರಮೇಶ್, ಕಾಂಗ್ರೆಸ್ ಮುಖಂಡರಾದ ಕೆ.ಕೆ.ರಾಧಾಕೃಷ್ಣ ಇತರರಿದ್ದರು.

ರಸ್ತೆ ಅಭಿವೃದ್ಧಿಗೆ ಚಾಲನೆ: ತಾಲೂಕಿನ ಕನ್ನಲಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು. ಬಳಿಕ ಮಾತನಾಡಿ, ಗ್ರಾಮದಲ್ಲಿ 18 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ತಿರುಗಾಟಕ್ಕೆ ಅನುಕೂಲವಾಗಲಿದೆ. ಕನ್ನಲಿ ಗ್ರಾಮ ವ್ಯಾಪ್ತಿಯ ಮುಖ್ಯರಸ್ತೆಗಳು ಶೇ.60ರಷ್ಟು ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯರಾದ ನವೀನ್‌ಕುಮಾರ್, ಜೆ.ಕೆ.ರವಿ, ಚಿಕ್ಕಮಾಸ್ತಿ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಮುಖಂಡರಾದ ಯೋಗಾನಂದ, ಚಂದ್ರು, ಲಕ್ಷ್ಮೀಕಾಂತ್, ಮಲ್ಲೇಶ್, ಯೋಗೇಶ್, ಆತ್ಮಾನಂದ, ಮಲ್ಲರಾಜು ಇತರರಿದ್ದರು.