ಮಂಡ್ಯ: ಚೀನಾದಲ್ಲಿ ಶೇ.80ರಷ್ಟು ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಜತೆಗೆ ಒಂದಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಚೀನಾದಲ್ಲಿ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೀನಾ ಪ್ರವಾಸ ಮುಗಿಸಿ ವಾಪಸಾಗಿರುವ ರವಿಕುಮಾರ್ ಗಣಿಗ ವಿಜಯವಾಣಿಯೊಂದಿಗೆ ಹಲವು ವಿಷಯ ಹಂಚಿಕೊಂಡಿದ್ದಾರೆ. ವೈರಸ್ ಸೋಂಕಿನಿಂದಾಗಿ ಸಾವು ಸಂಭವಿಸುತ್ತಿವೆ ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಅಂತಹ ಪರಿಸ್ಥಿತಿ ಕಂಡುಬರಲಿಲ್ಲ. ಆದಾಗ್ಯೂ ಬಹುತೇಕರು ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಅದು ಅವರ ಮುಂಜಾಗ್ರತೆ ಇರಬಹುದು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕಿಕೊಂಡಿರುವವರೇ ಕಾಣಸಿಗುತ್ತಿದ್ದರು. ಬಹುತೇಕ ಕಡೆ ಸ್ಯಾನಿಟೈಸರ್ ಇಡಲಾಗಿದೆ. ಅಂಗಡಿ ಮಾಲೀಕರು ಮಾಸ್ಕ್ ಹಾಕಿಕೊಂಡು ವ್ಯಾಪಾರ, ವಹಿವಾಟು ಮಾಡುತ್ತಿದ್ದರು ಎಂದು ವಿವರಿಸಿದರು.
ಇನ್ನು ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುತ್ತಿತ್ತು. ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೂ ಒಂದಷ್ಟು ನಿಯಮ ಜಾರಿಗೊಳಿಸಲಾಗಿತ್ತು. ನಾನು ನಾಲ್ಕು ದಿನದ ಪ್ರವಾಸ ಮುಗಿಸಿ ಬಂದಿದ್ದೇನೆ ಎಂದರು.