ಜಿಲ್ಲೆ

ಯುವಕರ ಬದುಕು ಹಾಳು ಮಾಡುತ್ತಿರುವ ಕ್ರಿಕೆಟ್ ಬೆಟ್ಟಿಂಗ್: ಬುಕ್ಕಿಗಳ ಮಾಹಿತಿ ನೀಡುವಂತೆ ಮನವಿ ಮಾಡಿದ ಶಾಸಕ ರವಿಕುಮಾರ್ ಗಣಿಗ

ಕೆ.ಎನ್.ರಾಘವೇಂದ್ರ

ಮಂಡ್ಯ: ಕ್ರಿಕೆಟ್ ಬುಕ್ಕಿಗಳು ತಮ್ಮ ಜೀವನಕ್ಕಾಗಿ ಯುವಕರನ್ನು ಹಾಳು ಮಾಡುತ್ತಿದ್ದಾರೆ. ಪರಿಣಾಮ ಅನಾಹುತ ಸಂಭವಿಸುತ್ತಿವೆ. ಆದ್ದರಿಂದ ತಮ್ಮ ಗ್ರಾಮದಲ್ಲಿ ಬೆಟ್ಟಿಂಗ್ ಆಡಿಸುವವರಿದ್ದರೆ ನನಗೆ ಅಥವಾ ಪೊಲೀಸರಿಗೆ ಮಾಹಿತಿ ಕೊಡಿ ಎಂದು ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.

ತಾಲೂಕಿನ ವಿವಿಧ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಬರುತ್ತಿರುವ ಕ್ರಿಕೆಟ್ ಬುಕ್ಕಿಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಆಸೆ, ಆಮಿಷ ತೋರಿಸಿ ಹಾಳು ಮಾಡುವ ಜತೆಗೆ ಸಾಲಗಾರರನ್ನಾಗಿಸುತ್ತಿದ್ದಾರೆ. ಬೈಕ್, ಚಿನ್ನಾಭರಣ ಅಡವಿಡುವಂತೆ ಮಾಡುತ್ತಿದ್ದಾರೆ. ಪರಿಣಾಮ ತಂದೆ, ತಾಯಿ ಕಣ್ಣೀರಾಕುವಂತಾಗಿದೆ. ಕೆಲವೇ ದಿನದಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಆದ್ದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ಕೊಡಿ. ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾನೂನುಬಾಹಿರ ಚಟುವಟಿಕೆ ಮಾಡುವವರ ವಿರುದ್ಧ ಪೊಲೀಸರು ಕ್ರಮ ವಹಿಸಿದ್ದಾರೆ. ರೌಡಿಸಂ ಮಾಡಿದವರನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ. ಅದಕ್ಕೂ ನನಗೂ ಸಂಬಂಧವೇನು?. ರೌಡಿಸಂ ಮಾಡುವವರು ಹಾಗೂ ಕ್ರಿಕೆಟ್ ಬೆಟ್ಟಿಂಗ್ ಆಡಿಸುವವರು ತಮ್ಮ ಕಡೆಯವರೆಂದು ಜೆಡಿಎಸ್‌ನವರು ಸ್ಪಷ್ಟಪಡಿಸಲಿ. ಒಂದು ವೇಳೆ ಹೊರ ಜಿಲ್ಲೆಯಿಂದ ಯುವಕರನ್ನು ಕರೆದುಕೊಂಡು ಬಂದು ರೌಡಿಸಂ, ಬೆಟ್ಟಿಂಗ್ ನಡೆಸಬೇಕೆಂದು ಕೊಂಡಿದ್ದಾರಾ?. ಈಗಾಗಲೇ ಬೆಟ್ಟಿಂಗ್‌ನಿಂದ ಯುವಕರು ಹಾಳಾಗಿದ್ದಾರೆ. ಮನೆ, ಚಿನ್ನಾಭರಣ ಮಾರಾಟ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಸಾತನೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಸೊಸೈಟಿ ಅಧ್ಯಕ್ಷ ಎಚ್.ಪಿ.ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಸದಸ್ಯ ಜಿ.ವಿ.ರವಿ, ಮಾಜಿ ಸದಸ್ಯ ಪ್ರಶಾಂತ್, ಮುಖಂಡರಾದ ಬಿ.ಎಲ್.ಶ್ರೀನಿವಾಸ್, ಕೇಶವ, ಪಾಪು ಇತರರಿದ್ದರು.