ಜಿಲ್ಲೆ

ಮಾ.7ರಂದು ರಾಮನಗರದಲ್ಲಿ ಉಪವಾಸ ಸತ್ಯಾಗ್ರಹ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಮಾ.7ರಂದು ರಾಮನಗರ ಜಿಲ್ಲೆ ಬಸವನಪುರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್‌ಪಾಸ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಅಂಡರ್‌ಪಾಸ್ ಕೈಬಿಟ್ಟು ಮೇಲ್ಸೆತುವೆ ಮಾಡುವುದಾಗಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರು, ಅದರಲ್ಲೂ ಮಹಿಳೆಯರಿಗೆ ಓಡಾಡಲು ತೀವ್ರ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ನಮಗೆ ಈ ಹಿಂದೆ ಭರವಸೆ ನೀಡಿದಂತೆ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾ.10ರಂದು ನಗರದಲ್ಲಿ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದು, ಅಂದು 33 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದ ಅವರು, ಮೈಷುಗರ್ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುತ್ತಮುತ್ತಲಿರುವ ಭೂಮಿ ಅಡವಿಟ್ಟು ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಅನುಕೂಲ ಮಾಡಿಕೊಡುವಂತಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಈ ಹಿಂದೆ ಅಸಿಟೇಟ್ ಫ್ಯಾಕ್ಟರಿ ಜಾಗವನ್ನು ರಿಯಲ್ ಎಸ್ಟೇಟ್ ಅವರಿಗೆ ನೀಡುವಾಗ ನಾನು ಎಂಎಲ್ಎ ಆಗಿರಲಿಲ್ಲ. ನಾನು ಶಾಸಕನಾಗಿರುವುದು ಸೇವೆ ಮಾಡಲು ಹೊರತು ರಿಯಲ್ ಎಸ್ಟೇಟ್ ಮಾಡಲು ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಮಂಡ್ಯದಲ್ಲಿ ಸಣ್ಣದೊಂದು ವ್ಯಾಪಾರವನ್ನು ನಾನು ಮಾಡುವುದಿಲ್ಲ. ಹೊಸ ಕಾರ್ಖಾನೆ ನಿರ್ಮಾಣವಾಗುವರೆಗೂ ಈ ಹಿಂದಿನಂತೆ ಕಾರ್ಖಾನೆ ನಡೆಯಲಿದೆ ಎಂದರು.

ಬೂದನೂರು ಗ್ರಾಮದ 35 ಜನರಿಗೆ ಹಕ್ಕು ಪತ್ರ ನೀಡಿದ್ದು, ಇನ್ನುಳಿದ ಎಂಟು ಜನರಿಗೆ ನೀಡಲು ಕಾನೂನು ತೊಡಕಿದೆ. ಅದನ್ನು ಬಗೆಹರಿಸಿ ಶೀಘ್ರದಲ್ಲೇ ಅವರಿಗೂ ಹಕ್ಕುಪತ್ರ ನೀಡಲಾಗುವುದು. ಹಕ್ಕುಪತ್ರ ಕೊಡಿಸಿದ ಹಿನ್ನೆಲೆಯಲ್ಲಿ ಪ್ರೀತಿಯಿಂದ ನನಗೆ ಬೆಳ್ಳಿ ಗದೆಯನ್ನು ನೀಡಿದ್ದಾರೆ. ಅದನ್ನು ಹನುಮ ಜಯಂತಿಯ ದಿನ ಕೆರಗೋಡಿನ ಆಂಜನೇಯ ದೇವಸ್ಥಾನಕ್ಕೆ ನೀಡುವುದಾಗಿ ತಿಳಿಸಿದರು.

ಗೌಡಗೆರೆ ಗ್ರಾ.ಪಂ ಅಧ್ಯಕ್ಷೆ ಸವಿತಾ, ಮುಖಂಡರಾದ ಬಿ.ಟಿ.ಚಂದ್ರಶೇಖರ್, ಹನಕೆರೆ ಜಯರಾಂ, ಗೌಡಗೆರೆ ಜಯರಾಂ ಇದ್ದರು.