ಮಂಡ್ಯ: ನಗರದ ಸ್ಲಂಗಳಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು ಖುದ್ದು ಭೇಟಿ ನೀಡುತ್ತೇನೆ. ಜತೆಗೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಶ್ರಮಿಕ ನಿವಾಸಿಗಳ ಒಕ್ಕೂಟದಿಂದ ಅಭಿನಂದನೆ ಸ್ವೀಕರಿಸಿ ಹಾಗೂ ಸ್ಲಂ ನಿವಾಸಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿರುವ 24 ಸ್ಲಂಗಳಿಗೂ ಭೇಟಿ ನೀಡುತ್ತೇನೆ. ಅಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯಗಳನ್ನು ಕೊಡಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಇದುವರೆಗೆ ಸ್ಲಂಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನಾಗಿದೆಯೋ ಗೊತ್ತಿಲ್ಲ?. ಆದರೆ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗುವಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ಪದಾಧಿಕಾರಿಗಳಾದ ಎನ್.ನಾಗೇಶ್, ಸಿದ್ದರಾಜು, ಪ್ರಕಾಶ್, ಮಹಿಳಾ ಮುನ್ನಡೆಯ ಪೂರ್ಣಿಮಾ, ಸೌಮ್ಯಾ ನಗರದ ಸ್ಲಂಗಳಲ್ಲಿರುವ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನೂತನ ಶಾಸಕರ ಮೇಲೆ ಜನರು ಬಹಳ ನಿರೀಕ್ಷೆಯಿಟ್ಟಿದ್ದು, ಸ್ಲಂಗಳ ಅಭಿವೃದ್ಧಿ ಬಗ್ಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಮಂಡ್ಯದ ಕಾಳಿಕಾಂಬ ದೇವಾಲಯದ ಹಿಂಭಾಗದಲ್ಲಿರುವ ಕಾಳಿಕಾಂಬ ಸ್ಲಂ ನಿವಾಸಿಗಳು ಅತಂತ್ರರಾಗಿದ್ದಾರೆ. ಅವರಿಗೆ ರಾಜೀವ್ ಆವಾಸ್‌ಯೋಜನೆಯಡಿ ಮನೆ ನಿರ್ಮಾಣವಾಗಬೇಕಿತ್ತು. ಆದರೆ ಕಾಳಿಕಾಂಬ ಟ್ರಸ್ಟ್‌ನವರು ಒಪ್ಪಂದದ ಕರಾರನ್ನು ಮುರಿದು ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದಾರೆ ಎಂಬ ಮಾಹಿತಿಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸಮಸ್ಯೆ ಸಂಬಂಧ ಕಾಳಿಕಾಂಬ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಅಂತೆಯೇ ಮಂಡ್ಯ ನಗರದ ಆರ್‌ಟಿಒ ಕಚೇರಿ ಮುಂಭಾಗದ ಕಾಳಪ್ಪ ಬಡಾವಣೆಯಲ್ಲಿ ಶೀಘ್ರ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ತಿಳಿದು ಪರಿಹರಿಸುತ್ತೇನೆ. ಪ್ರತಿ ವಾರ ಒಂದೊಂದು ಸ್ಲಂ ಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳು ಮತ್ತು ಆಗಬೇಕಾದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಚಿದಂಬರ್, ಪಳನಿ ಇತರರಿದ್ದರು.