ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುವ ಮಳೆನೀರನ್ನು ಚರಂಡಿಗೆ ಬಿಡುತ್ತಿರುವುದರಿಂದ ನಗರದ ಕೆರೆಯಂಗಳದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಚರಂಡಿಯನ್ನು ದೊಡ್ಡದು ಮಾಡುವಂತೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ತುರ್ತು ಕ್ರಮ ವಹಿಸಿದ್ದರೆ ರಸ್ತೆ ಬಂದ್ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆರೆಯಂಗಳದಲ್ಲಿ ಕೆಎಚ್‌ಬಿ ವತಿಯಿಂದ ನಿರ್ಮಿಸಿರುವ ಬಡಾವಣೆ ಹಾಗೂ ಬೀಡಿ ಕಾಲನಿಗೆ ಭೇಟಿ ನೀಡಿ ಮೂಲ ಸೌಲಭ್ಯದ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆ-ಮೈ ಹೆದ್ದಾರಿಯಲ್ಲಿ ಹರಿಯುವ ನೀರನ್ನು ಚರಂಡಿ ಮೂಲಕ ಹರಿಬಿಡಲಾಗುತ್ತಿದೆ. ಆದರೆ ಚರಂಡಿ ಚಿಕ್ಕದಿರುವುದರಿಂದ ಕೆರೆಯಂಗಳದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚರಂಡಿ ದೊಡ್ಡದು ಮಾಡಬೇಕಿದೆ. ಅದರಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವಾರದ ಗಡುವು ಕೊಡಲಾಗಿದೆ. ಕ್ರಮ ತೆಗೆದುಕೊಳ್ಳದಿದ್ದರೆ ಹೆದ್ದಾರಿ ಸಂಚಾರ ಬಂದ್ ಮಾಡುವುದು ಅನಿವಾರ್ಯ ಎಂದರು.
ಮಳೆ ಬಂದರೆ ಬೀಡಿ ಕಾಲನಿ ಸಮುದ್ರದಂತಾಗುತ್ತದೆ. ಪರಿಣಾಮ ಜನಸಾಮಾನ್ಯರು ಬದುಕುವುದೇ ಕಷ್ಟವಾಗುವಂತಾಗುತ್ತದೆ. ಹಿಂದೆ ಅವಾಂತರ ಸೃಷ್ಟಿಯಾದಾಗ ಫುಡ್‌ಕಿಟ್ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾದರೆ 5 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅನುದಾನ ಬಂದರೆ ಹೊಸ ವಾಲ್ ಅಳವಡಿಸಿ ನೀರು ಹರಿಯುವಂತೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚೆ ಮಾಡಿ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಬೀಡಿ ಕಾಲನಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಾದರೆ ಒಂದು ವರ್ಷ ಬೇಕಾಗುತ್ತದೆ. ಆದರೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ಇನ್ನು ಸ್ಥಳೀಯ ನಿವಾಸಿಗಳು ಮೂಲ ಸೌಲಭ್ಯವಿಲ್ಲದೆ ಬದುಕು ನಡೆಸುವಂತಾಗಿದೆ. ಆದ್ದರಿಂದ ರಸ್ತೆ, ಡಾಂಬರೀಕರಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ತೆಗೆದುಕೊಳ್ಳಲಾಗುವುದು. ಹಂತ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗುವುದು. ಸ್ಥಳೀಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ನಮ್ಮ ಹಾಗೂ ನಗರಸಭೆ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಮುಖವಾಗಿ ಸ್ಥಳೀಯ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿರುವುದು ಚರಂಡಿ. ಹಲವು ವರ್ಷಗಳಿಂದ ಸ್ವಚ್ಛತೆ ಮಾಡದ ಪರಿಣಾಮ ಕೆಟ್ಟ ವಾಸನೆ ಜತೆಗೆ ತೊಂದರೆಯಾಗಿ ಪರಿಣಮಿಸಿದೆ. ಆದ್ದರಿಂದ ಈ ಕುರಿತು ತುರ್ತು ಕ್ರಮ ವಹಿಸಲಾಗುತ್ತಿದ್ದು, ಕೂಡಲೇ ಚರಂಡಿಯಲ್ಲಿರುವ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ. ಅದರಂತೆ ಶೀಘ್ರವೇ ಟೆಂಡರ್ ಕರೆದು ತ್ಯಾಜ್ಯ ತೆಗೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಬೀಡಿ ಕಾಲನಿ ಅಭಿವೃದ್ಧಿ ಸಂಬಂಧ ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮದ್ ಅವರಿಗೆ ಮನವಿ ಮಾಡಿದ್ದು, ಅನುದಾನ ಕೊಡುವುದು ತಿಳಿಸಿದ್ದಾರೆ. ಶೀಘ್ರದಲ್ಲೇ ಅವರು ಕೂಡ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ರೈತರಿಗೆ ಖುಷಿ ವಿಚಾರ: ಮೈಷುಗರ್ ಕಾರ್ಖಾನೆ ಪ್ರಾರಂಭ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರವೇ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ರೈತರಿಗೆ ಸಮಸ್ಯೆಯಾಗದಂತೆ ಹಾಗೂ ಜೂನ್‌ನಿಂದ ಕಬ್ಬು ಅರೆಸುವ ಸಂಬಂಧ ಅನುದಾನ ಕೋರಿ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ನಮ್ಮ ಬೇಡಿಕೆಯಂತೆ ಅನುದಾನ ಬಿಡುಗಡೆ ಮಾಡಲಿದ್ದಾರೆ. ಅದನ್ನು ಬಳಸಿಕೊಂಡು ಕಬ್ಬು ಅರೆಸಲು ಕ್ರಮ ವಹಿಸಲಾಗುವುದು. ಇದು ರೈತರಿಗೆ ಖುಷಿಯ ವಿಚಾರ ಎಂದು ಹೇಳಿದರು.
ನಗರಸಭೆ ಸದಸ್ಯ ನಯೀಂ, ಮಂಡ್ಯ ಪ್ರಭಾರ ಉಪವಿಭಾಗಾಧಿಕಾರಿ ಕೃಷ್ಣಕುಮಾರ್, ತಹಸೀಲ್ದಾರ್ ವಿಜಯ್‌ಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಂಜಿನಿಯರ್ ದರ್ಶನ್, ನಗರಸಭೆ ಇಂಜಿನಿಯರ್ ರವಿಕುಮಾರ್, ಆರೋಗ್ಯ ಪರಿವೀಕ್ಷಕ ಚೆಲುವರಾಜು ಇತರರಿದ್ದರು.