ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕ ರವಿಕುಮಾರ್ ಗಣಿಗ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹೊಡಾಘಟ್ಟ, ಚಲ್ಲನಾಯ್ಕನಹಳ್ಳಿ, ಚಿಕ್ಕಬಳ್ಳಿ, ಗುಡೇನಹಳ್ಳಿ, ಎಂ.ಹಟ್ನ ಹಾಗೂ ದೊಡ್ಡಕೊತ್ತಗೆರೆ ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಜೆಸಿಬಿಯಲ್ಲಿ ಹೂವಿನ ಮಳೆ ಸುರಿಸಿ ಶಾಸಕರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಹೊಡಾಘಟ್ಟ ಗ್ರಾಮದಲ್ಲಿ ರವಿಕುಮಾರ್ ಹಾಗೂ ಸಿ.ತ್ಯಾಗರಾಜು ಯುವಕರೊಂದಿಗೆ ಡಾನ್ಸ್ ಮಾಡುವ ಮೂಲಕ ಹಬ್ಬದ ಕಳೆಯನ್ನು ಹೆಚ್ಚಿಸಿದರು. ಬಳಿಕ ಮಾನವಂತರ ಮನೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅಂತೆಯೇ ಗುಡಿಗೇನಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಹಾಗೂ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೊಡ್ಡಕೊತ್ತಗೆರೆ ಗ್ರಾಮದಲ್ಲಿ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿದರು. ಇನ್ನು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಯುವಕರೊಂದಿಗೆ ಕೆಲವೊತ್ತು ಮಾತುಕತೆ ನಡೆಸಿದ ಶಾಸಕ ರವಿಕುಮಾರ್ ಗಣಿಗ, ನಿಮ್ಮ ತಂಡದ ಹೆಸರಿನಲ್ಲಿ ಗ್ರಾಮಕ್ಕೆ ಆಗಬೇಕಿರುವ ಅಭಿವೃದ್ಧಿ ಕೆಲಸವನ್ನು ಅನುಷ್ಠಾನಗೊಳಿಸೋಣ. ಇದಕ್ಕೆ ಶೀಘ್ರವೇ ಅನುದಾನ ನೀಡುತ್ತೇನೆ. ಯುವಕರ ಹೆಸರಿನಲ್ಲಿಯೇ ಆ ಕೆಲಸ ನಡೆಯಲಿ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ರಘು, ದೇವರಾಜು ಇತರರಿದ್ದರು.