ಮಂಡ್ಯ: ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ತಲಾ 10 ಕೋಟಿ ರೂ ನೀಡಲಾಗಿದೆ. ಮಾತ್ರವಲ್ಲದೆ ಗ್ಯಾರಂಟಿ ಯೋಜನೆಯಲ್ಲಿ 1 ಲಕ್ಷ ಕೋಟಿ ರೂ ಎಲ್ಲ ಕ್ಷೇತ್ರಕ್ಕೂ ನೀಡಲಾಗುತ್ತಿದೆ. ಆದರೆ ಅನುದಾನ ತಾರತಮ್ಯವೆಂದು ಜೆಡಿಎಸ್‌ನವರು ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಟೀಕಿಸಿದರು.
ಅನುದಾನ ತಾರತಮ್ಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೈಕೋರ್ಟ್‌ಗೆ ರಿಟ್ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆಂದು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ ಕೊಟ್ಟಾಗ ಇತರೆ ಶಾಸಕರಿಗೂ 25 ಕೋಟಿ ರೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನ ಸಿಗಲಿದೆ. ರಾಜ್ಯಾದ್ಯಂತ 10ಸಾವಿರ ಗುಂಡಿ ಮುಚ್ಚಲಾಗುತ್ತಿದೆ. 17 ಸಾವಿರ ಕೋಟಿ ರೂ ವೆಚ್ಚದಲ್ಲಿ ಟನಲ್ ನಿರ್ಮಾಣ ಮಾಡಲಾಗುತ್ತಿದೆ. ಈ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ಸಿಗರಿಗೆ ಮಾತ್ರ ಉಪಯೋಗ ಆಗುತ್ತಾ?. ಜೆಡಿಎಸ್, ಬಿಜೆಪಿಯವರು ಉಪಯೋಗ ಪಡೆಯಲ್ವಾ?. ಆದ್ದರಿಂದ ಜೆಡಿಎಸ್‌ನವರು ನ್ಯಾಯಾಲಯಕ್ಕಾದರೂ ಸತ್ಯ ಹೇಳಬೇಕಲ್ವಾ ಎಂದರು.
ಬೆಂಗಳೂರು ಒಂದಕ್ಕೆ 1 ಲಕ್ಷ ಕೋಟಿ ರೂಗಳನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದೆ. ಮುಂಬೈ, ದೆಹಲಿಯ ರಸ್ತೆಗಳು ಗುಂಡಿ ಬಿದ್ದಿದೆ. ಅದರ ಬಗ್ಗೆ ಯಾರು ಮಾತಾಡಲ್ಲ. ಬೆಂಗಳೂರು ಅಭಿವೃದ್ಧಿ ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಮಿಷನ್ ಪಡೆದು ಟೈಂ ಪಾಸ್ ಮಾಡಿದ್ದರು. ಈಗ ನಾವು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ಹಾಗಿದ್ದರೆ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧವೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ. ಅತೀ ಹೆಚ್ಚು ಜಿಎಸ್‌ಟಿ ತೆರಿಗೆ ಕೊಡುತ್ತಿದ್ದರೂ ಅನುದಾನ ತಾರತಮ್ಯ ಮಾಡುತ್ತಿದ್ದಾರೆ. ಚುನಾವಣೆಗಾಗಿ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ರಾಜಕೀಯ ಆರೋಪ ಮಾಡುವುದನ್ನ ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾವನೆ ಸಲ್ಲಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ, ಆರ್‌ಎಸ್‌ಎಸ್ ಅನ್ನು ಸಂಪೂರ್ಣ ನಿಷೇಧ ಮಾಡುತ್ತೇವೆಂದು ಹೇಳಿಲ್ಲ. ಆರ್‌ಎಸ್‌ಎಸ್ ಕೋಮು ವಿಷಬೀಜ ಬಿತ್ತುತ್ತಿದೆ. ಅದಕ್ಕಾಗಿ ಸರ್ಕಾರಿ ಜಾಗ, ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಳಿದ್ದಾರೆ. ಆ ಸಂಘಟನೆ ಯಾವ ದೇವಸ್ಥಾನ ಅಭಿವೃದ್ಧಿ ಮಾಡಿದ್ದಾರೆ. ಯಾವ ಹಿಂದುತ್ವ ಉಳಿಸುತ್ತಿದ್ದಾರೆ. ನಾವು ಗಣೇಶನಿಗೆ ದುಡ್ಡು ಕೊಡಲ್ವ?, ಪೂಜೆ ಮಾಡಲ್ಲ?, ನೀವು ಮಾತ್ರ ಭಕ್ತರಾ?. ಅವರದು ಡ್ರಾಮ, ನಮ್ಮದು ನಿಜವಾದ ಹಿಂದುತ್ವ?. ಅಭಿವೃದ್ಧಿ ಕೆಲಸಗಳನ್ನ ಕೋಮುದ್ವೇಷ ಸೃಷ್ಟಿಸಿ ಮುಚ್ಚಿ ಹಾಕುತ್ತಿದ್ದಾರೆ. ಕರಾವಳಿ ರೀತಿ ಮಂಡ್ಯದ ಮೇಲೆ ಪ್ರಯೋಗ. ಆದ್ದರಿಂದ ಮಂಡ್ಯದ ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು.
ನವೆಂಬರ್‌ನಲ್ಲಿ ಕ್ರಾಂತಿ ಆಗಲ್ಲ. ಒಂದು ವೇಳೆ ಕ್ರಾಂತಿ ಆಗುವುದುದು ಬಿಜೆಪಿಯಲ್ಲಿ, ಕಾಂಗ್ರೆಸ್‌ನಲ್ಲಿ ಶಾಂತಿಯಿಂದ ಆಗಲಿದೆ. ಸಿಎಂ, ಡಿಸಿಎಂ ಇಬ್ಬರಿಗೂ 140 ಶಾಸಕರ ಬೆಂಬಲ ಇದೆ. ಯಾವಾಗ ಯಾರು ಏನಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಎಲ್ಲವೂ ಶಾಂತಿ ಸಮನ್ವಯತೆಯಿಂದಲೇ ಆಗುತ್ತದೆ. ಸಿದ್ದರಾಮಯ್ಯ, ಡಿಕೆಶಿ ರಾಮ ಮತ್ತು ಲಕ್ಷ್ಮಣ ರೀತಿ ಇದ್ದಾರೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾರೆ. ನವೆಂಬರ್ ಕ್ರಾಂತಿ ಬಿಜೆಪಿ ಪಕ್ಷದಲ್ಲಿ ಆಗುತ್ತದೆ. ವಿಜಯೇಂದ್ರ, ಆರ್.ಅಶೋಕ್ ಸ್ಥಾನ ಅಲುಗಾಡಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಶಾಂತಿಯಿಂದ ಆಗಲಿದೆ ಎಂದರು.
ಜೆಡಿಎಸ್‌ಗೆ ಬಿಜೆಪಿ ಕೊನೆ ಮೊಳೆ
ಜೆಡಿಎಸ್‌ಗೆ ಕೊನೆ ಮೊಳೆ ಹೊಡೆಯಲು ಬಿಜೆಪಿ ಪ್ಲಾನ್ ಮಾಡಿದೆ. ಇದು ಜೆಡಿಎಸ್ ಕಾರ್ಯಕರ್ತರಿಗೆ ಅರ್ಥ ಆಗುತ್ತಿಲ್ಲ. ಕಾಂಗ್ರೆಸ್ ಮೇಲಿನ ಕೋಪಕ್ಕೆ ಜೆಡಿಎಸ್‌ನವರು ಬಿಜೆಪಿಗೆ ಜೈ ಎನ್ನುತ್ತಿದ್ದಾರೆ. ಹೀಗೆ ಮಾಡುತ್ತಿದ್ದರೆ ಜೆಡಿಎಸ್ ಗೂಟ ಢಮಾರ್. ಜಿಲ್ಲೆಯ 6 ಕ್ಷೇತ್ರದಲ್ಲಿ 3 ಕ್ಷೇತ್ರ ಬಿಜೆಪಿಯವರು ಕೇಳುತ್ತಿದ್ದಾರೆ. ಕುಮಾರಣ್ಣನ 20 ತಿಂಗಳ ಸರ್ಕಾರ ತೆಗೆದವರು ಇದೇ ಬಿಜೆಪಿ ನಾಯಕರು. ಈಗ ಕೇಂದ್ರ ಮಂತ್ರಿ ಪದವಿ ಕೊಟ್ಟು ನಿರ್ನಾಮ ಮಾಡುತ್ತಿದ್ದಾರೆ. ಜೆಡಿಎಸ್ ಕೇಡರ್ ಕಿತ್ತು ಬಿಜೆಪಿ ತೆಗೆದುಕೊಳ್ಳುತ್ತಿದೆ ಎಂದು ಶಾಸಕ ರವಿಕುಮಾರ್ ಹೇಳಿದರು.