ಜಿಲ್ಲೆ

ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಕಿತ್ತಾಟವಿಲ್ಲ- ರಾಮಲಿಂಗಾರೆಡ್ಡಿ

ತುಮಕೂರು (ಕುಣಿಗಲ್)
ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಯಾವುದೇ ಕಿತ್ತಾಟವಿಲ್ಲ. ಹಿಂಬಾಲಕರು ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.


ತಾಲೂಕಿನ ಕೊತ್ತೆಗೆರೆ ಹೋಬಳಿ ಗಿಡದಪಾಳ್ಯ ಗ್ರಾಮದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಶಾಸಕ ಡಾ.ಎಚ್.ಡಿ.ರಂಗನಾಥ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಎಲ್ಲೂ ಮಾತನಾಡುತ್ತಿಲ್ಲ, ಅವರ ಹಿಂಬಾಲಕರು ಮಾತನಾಡುತ್ತಿದ್ದು ಇದಕ್ಕೆ ಹೆಚ್ಚು ಮಹತ್ವ ನೀಡುವ ಅವಶ್ಯಕತೆ ಇಲ್ಲ. ಮುಂಬರುವ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುತಮ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬಿಜೆಪಿ ಸರ್ವಾಧಿಕಾರ ಧೋರಣೆ : ಬಿಜೆಪಿ ಪಕ್ಷದ ವಿರುದ್ದವಾಗಿ ದ್ವನಿ ಎತ್ತುವ 570 ಕ್ಕೂ ಅಧಿಕ ವಿಪಕ್ಷ ನಾಯಕರ ವಿರುದ್ದ ಐಟಿ, ಇಡಿ, ಸಿಬಿಐ ಪ್ರಕರಣ ದಾಖಲಿಸುತ್ತಿದ್ದಾರೆ, ಬಿಜೆಪಿಗೆ ಇದೊಂದು ಚಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಮಲಿಂಗರೆಡ್ಡಿ ಬಿಜೆಪಿ ಪಕ್ಷದ ವಿರುದ್ದವಾಗಿ ಯಾವ ಪಕ್ಷವು ತಲೆ ಎತ್ತಬಾರದೆಂಬ ಸರ್ವಾಧಿಕಾರಿ ಧೋರಣೆಯನ್ನು ಆ ಪಕ್ಷ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.