ಜಿಲ್ಲೆ

ಬಿಎಸ್‌ವೈ ರಾಜೀನಾಮೆಯಿಂದ ಕೈಗೆ ಲಾಭ, ನಷ್ಟ ಇಲ್ಲ ; ಶಾಸಕ ರಮೇಶ್‌ಕುಮಾರ್ ಅಭಿಪ್ರಾಯ

Kolar

ಕೋಲಾರ : ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್‌ಗೆ ಪ್ಲಸ್ ಅಥವಾ ಮೈನಸ್ ಆಗುವುದಿಲ್ಲ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಅಭಿಪ್ರಾಯಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ರಾಜಕಾರಣಿ ಅಧಿಕಾರ ಬಿಟ್ಟು ಹೋಗುವಾಗ ಬೇಸರವಾಗುವುದು ಸಹಜ. ಯಡಿಯೂರಪ್ಪ ರಾಜೀನಾಮೆಯಿಂದ ನನಗೂ ನೋವಾಗಿದೆ. ಅವರಿಗೂ ನೋವಾಗುತ್ತದೆ. ರಾಜೀನಾಮೆ ನಂತರ ಬೇಸರ ಸಹಜ, ಒಂದೆರೆಡು ದಿನಗಳ ನಂತರ ಸರಿಹೋಗುತ್ತದೆ ಎಂದರು.

45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳು ನೋಡಿದ್ದಾರೆ. ಅವರಿಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರ ತೀರ್ಮಾನದಂತೆ ಅಧಿಕಾರದಿಂದ ನಿರ್ಗಮಿಸಿರುವುದರಿಂದ ಈ ಕುರಿತು ನಾನು ಹಗುರವಾಗಿ ಮಾತನಾಡುವುದಿಲ್ಲ ಎಂದರು.

ಯಡಿಯೂರಪ್ಪ ಹೋರಾಟದಿಂದ ಬಂದಿದ್ದಾರೋ ಇಲ್ಲವೋ ಎಂಬ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ, ಅವರಿಗೆ ಈಗ 78 ವರ್ಷ. ಒತ್ತಡ ಎಲ್ಲರಿಗೂ ಇರುತ್ತದೆ. ವಿಶ್ರಾಂತಿಯೂ ಅವಶ್ಯಕ. ಅವರ ಮುಂದಿನ ಜೀವನ ಸುಗಮವಾಗಿರಲಿ, ದೇವರು ಅವರಿಗೆ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಪ್ರವಾಹ ನಂತರ ಕರೊನಾ ಸಾಕಷ್ಟು ಚಿಂತೆಗೀಡು ಮಾಡಿತು. ಅವರ ಕೈಲಾದಷ್ಟು ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಮುಂದೆ ರಾಜಕಾರಣ ಯಾವ ದಿಕ್ಕಿಗೆ ಸರಿಯುತ್ತದೋ ತಿಳಿಸಲು ನಾನು ಜ್ಯೋತಿಷಿಯಲ್ಲ. ರಾಜ್ಯದ ಜನರಿಗೆ ನೆಮ್ಮದಿ ಸಿಗುವಂತಾಗಬೇಕು ಎಂದರು.

ಯಡಿಯೂರಪ್ಪ ರಾಜೀನಾಮೆಯಿಂದ ರಾಜ್ಯದಲ್ಲಿ ಏನೋ ಆಗುತ್ತದೆ ಎಂಬ ಭ್ರಮೆ ನನಗಿಲ್ಲ, ಕಾಂಗ್ರೆಸ್ ಸಹ ಆ ರೀತಿ ಯೋಚನೆ ಮಾಡಲಾರದು ಎಂದುಕೊಂಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಯಾರಿಗೂ ಬೇಕಾಗಿಲ್ಲ ಎಂಬುದು ನನ್ನ ಭಾವನೆ. ಅದಕ್ಕೂ ಮೀರಿ ಏನಾದರೂ ಕುತೂಹಲ ಉಂಟಾದರೆ ಯಾರನ್ನೂ ದೂಷಿಸಬೇಕಿಲ್ಲ ಎಂದರು.

ಕಷ್ಟ-ಸುಖ ಕೇಳಬಹುದಿತ್ತು:ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಹೋದವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಸಿದ್ಧಾಂತ ನಂಬಿ, ಮೋದಿ, ಅಮಿತ್‌ಷಾ, ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೋದರೋ ಗೊತ್ತಿಲ್ಲ, ಯಾರೂ ನನಗೆ ಏನೂ ಹೇಳಿಲ್ಲ, ಬಾಂಬೆಗೆ ಹೋದವರು ಮತ್ತೆ ವಾಪಸ್ ನಮ್ಮ ಹತ್ರ ಬರಲಿಲ್ಲ. ಬಂದಿದ್ದರೆ ಅವರ ಕಷ್ಟ ಸುಖ, ಉದ್ದೇಶಗಳ ಬಗ್ಗೆ ಕೇಳಿ ತಿಳಿದುಕೊಳ್ಳಬಹುದಿತ್ತು ಎಂದು ರಮೇಶ್‌ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.