ಪರಶುರಾಮಪುರ: ಜನರ ಸಮಸ್ಯೆಗಳ ಪರಿಹಾರಕ್ಕೆ ಬದ್ಧನಾಗಿದ್ದು, ಈ ಹಿನ್ನೆಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಗ್ರಾಮದ ಹೊರವಲಯದ ಕೆರೆಕೋಡಿ ಹಳ್ಳ ಹಾಗೂ ಕಡೇಹುಡೆ ಗೇಟ್ ಬಳಿ ಈಚೆಗೆ ಆಯೋಜಿಸಿದ್ದ ಸೇತುವೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಳೆಗಾಲದಲ್ಲಿ ಇಲ್ಲಿನ ಜನ ಸಂಕಷ್ಟ ಅನುಭವಿಸುವಂತಾಗಿತ್ತು. ಜತೆಗೆ ಅನೇಕ ಜಾನುವಾರುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ. ಇದನ್ನು ಮನಗಂಡು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಸ್ಥಳೀಯರು ಗುಣಮಟ್ಟದ ಕಾಮಗಾರಿ ಆಗುವ ರೀತಿ ಗಮನಹರಿಸಬೇಕು ಎಂದು ಹೇಳಿದರು.
ಪಿಡಬ್ಲ್ಯುಡಿ ಎಇಇ ವಿಜಯಭಾಸ್ಕರ ಮಾತನಾಡಿ, ಪರಶುರಾಮಪುರ ಸುತ್ತಲಿನ ಐದಾರು ಸ್ಥಳದಲ್ಲಿ ಸೇತುವೆ ನಿರ್ಮಾಣ, ರಸ್ತೆ ಡಾಂಬರೀಕರಣ ಕಾಮಗಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರುವಲ್ಲಿ ಶಾಸಕರ ಶ್ರಮ ಬಹಳಷ್ಟು ಇದೆ ಎಂದರು.
ಗ್ರಾಪಂ ಅಧ್ಯಕ್ಷ ಎ.ಜಗಳೂರಸ್ವಾಮಿ, ಉರ್ಪಾಧ್ಯಕ್ಷೆ ಸರೋಜಾ ಚಿತ್ತಯ್ಯ, ಸದಸ್ಯರಾದ ಟಿ.ಶ್ರೀನಿವಾಸ, ರುದ್ರೇಶ, ಪ್ರಕಾಶ, ಗುತ್ತಿಗೆದಾರ ಹನುಮಂತಪ್ಪ, ಜಯಣ್ಣ, ಪ್ರಕಾಶ, ರವಿ ಇದ್ದರು.